ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 130ಕ್ಕೂ ಹೆಚ್ಚಿನ ಕಡೆ ನಕಲಿ ಔಷಧ ಪೂರೈಸಿದ್ದ ಔಷಧ ಮಾರಾಟ ಏಜೆನ್ಸಿಯ ಮಾಲಿಕನೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ಬಂಧಿಸಿದೆ. ವಿ.ವಿ.ಪುರದ ನಿವಾಸಿ ವೀರೇಶ್‌ಕುಮಾರ್‌ ಜೈನ್‌ ಬಂಧಿತನಾಗಿದ್ದು, ಆತನ ಬಳಿ ದಾಖಲೆಗಳು ಮತ್ತು ಔಷಧಗಳನ್ನು ಜಪ್ತಿ ಮಾಡಲಾಗಿದೆ

ಬೆಂಗಳೂರು : ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 130ಕ್ಕೂ ಹೆಚ್ಚಿನ ಕಡೆ ನಕಲಿ ಔಷಧ ಪೂರೈಸಿದ್ದ ಔಷಧ ಮಾರಾಟ ಏಜೆನ್ಸಿಯ ಮಾಲಿಕನೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ಬಂಧಿಸಿದೆ.

ವಿ.ವಿ.ಪುರದ ನಿವಾಸಿ ವೀರೇಶ್‌ಕುಮಾರ್‌ ಜೈನ್‌ ಬಂಧಿತನಾಗಿದ್ದು, ಆತನ ಬಳಿ ದಾಖಲೆಗಳು ಮತ್ತು ಔಷಧಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಔಷಧ ಮಾರಾಟ ಜಾಲ ಪ್ರಕರಣ ಹಿನ್ನೆಲೆಯಲ್ಲಿ ವಿನರ್ವ ವೃತ್ತದಲ್ಲಿರುವ ವೀರೇಶ್‌ಗೆ ಸೇರಿದ ಔಷಧ ಮಾರಾಟ ಏಜೆನ್ಸಿ ಮೇಲೆ ಶುಕ್ರವಾರ ಎಸ್‌ಐಟಿ ದಾಳಿ ನಡೆಸಿದ ವೇಳೆ ದಾಖಲೆ ಜಾಲಾಡಿದಾಗ ಅಕ್ರಮಕ್ಕೆ ಪುರಾವೆ ಸಿಕ್ಕಿದೆ. ಈ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಂತರ ಶನಿವಾರ ಎಸ್‌ಐಟಿ ಬಂಧನಕ್ಕೊಳಪಡಿಸಿದೆ.

ರಾಜಸ್ಥಾನದಿಂದ ಬಂದು ನಕಲಿ ಔಷಧ ವ್ಯವಹಾರ:

ವೀರೇಶ್ ಮೂಲತಃ ರಾಜಸ್ಥಾನದವನಾಗಿದ್ದು, ದಶಕಗಳ ಹಿಂದೆ ಕೆಲಸ ಅರಸುತ್ತ ನಗರಕ್ಕೆ ಆತ ಬಂದಿದ್ದ. ನಂತರ ನಗರದಲ್ಲಿ ತನ್ನ ಮಾವನಿಗೆ ಸೇರಿದ ಔಷಧ ಮಾರಾಟ ಏಜೆನ್ಸಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಆರಂಭಿಸಿದ. ಆಗ ಔಷಧ ವ್ಯಾಪಾರದ ಬಗ್ಗೆ ತಿಳಿದುಕೊಂಡ ಆತ, ಕೊನೆಗೆ ಕೃಪಾ ಫಾರ್ಮಾ ಹೆಸರಿನಲ್ಲಿ ಪ್ರತ್ಯೇಕ ಔಷಧ ಮಾರಾಟ ಏಜೆನ್ಸಿ ಶುರು ಮಾಡಿದ್ದಾನೆ. ಇದೇ ವೇಳೆ ಆತನಿಗೆ ನಕಲಿ ಔಷಧ ಮಾರಾಟ ದಂಧೆ ಮಾಡುತ್ತಿದ್ದ ಪ್ರಶಾಂತ್ ಪರಿಚಯವಾಗಿದೆ. ಈ ಸ್ನೇಹದಲ್ಲೇ ದೇಶ-ವಿದೇಶಗಳಿಂದ ಕಡಿಮೆ ಬೆಲೆಗೆ ಔಷಧ ತಂದು ಮಾರಾಟ ಮಾಡುವ ಕೃತ್ಯಕ್ಕೆ ಗೆಳೆಯನಿಗೆ ವೀರೇಶ್ ಸಾಥ್ ಕೊಟ್ಟಿದ್ದ. ಹಲವು ನಕಲಿ ಔಷಧಗಳಿಗೆ ಲೇಬಲ್ ಅಂಟಿಸಿ ಸಹ ಆತ ಮಾರಾಟ ಮಾಡಿದ್ದಾನೆ.

ಇತ್ತೀಚೆಗೆ ತಾವರೆಕೆರೆಯಲ್ಲಿ ಪತ್ತೆಯಾದ ನಕಲಿ ಔಷಧ ಮಾರಾಟ ದಂಧೆ ವಿರುದ್ಧ ತನಿಖೆಗಿಳಿದ ಎಸ್‌ಐಟಿ, ಆ ದಂಧೆಯ ಸಂಪರ್ಕ ಜಾಲ ಶೋಧಿಸಿದಾಗ ವೀರೇಶ್ ಬಗ್ಗೆ ಸುಳಿವು ಸಿಕ್ಕಿತು. ಈ ಮಾಹಿತಿ ಮೇರೆಗೆ ವೀರೇಶ್‌ನ ಕಚೇರಿ ಹಾಗೂ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿತು. ಈ ವೇಳೆ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳ ಪ್ರತಿಷ್ಠಿತ ಆಸ್ಪತ್ರೆಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಸೇರಿ ಸುಮಾರು 130 ಕಡೆಗೆ ಔಷಧವನ್ನು ವೀರೇಶ್ ಪೂರೈಸಿರುವುದು ಬಯಲಾಗಿದೆ ಎಂದು ಮೂಲಗಳು ಹೇಳಿವೆ.

9 ಕೋಟಿ ಮೌಲ್ಯದ ಅಕ್ರಮ ಔಷಧ ಪತ್ತೆ

ಪ್ರಾಥಮಿಕ ಹಂತದಲ್ಲಿ ಸುಮಾರು 9 ಕೋಟಿ ರು ಮೌಲ್ಯದ ಔಷಧವನ್ನು ವೀರೇಶ್ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಆತನ ಏಜೆನ್ಸಿಯಲ್ಲಿ ಜಪ್ತಿಯಾದ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ. ಹೀಗಾಗಿ ಮುಂದಿನ ಹಂತದಲ್ಲಿ ವೀರೇಶ್‌ನ ಮತ್ತಷ್ಟು ಅಕ್ರಮ ಪತ್ತೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಬ್ಬದ ಬಳಿಕ ಆರೋಪಿಗೆ ಗ್ರೀಲ್

ಮಾಗಡಿ ನ್ಯಾಯಾಲಯಕ್ಕೆ ಆರೋಪಿ ವೀರೇಶ್‌ನನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದ ಬಳಿಕ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಆರೋಪಿ ಕಚೇರಿಯಲ್ಲಿ ಜಪ್ತಿಯಾದ ದಾಖಲೆಗಳ ಪರಿಶೀಲನೆ ಕಾರ್ಯ ಮುಗಿದ ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ.