ತಿಮ್ಮೇಗೌಡ ಎಂಬುವರಿಗೆ ಸೇರಿದ ಟೀ-ಡೇ ಕಾಫಿ ಶಾಪ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಟೀ-ಡೇ ಅಂಗಡಿ ಪಕ್ಕದಲ್ಲಿರುವ ಟೈಲ್ಸ್ ಅಂಗಡಿಗೂ ಬೆಂಕಿಯ ಕೆನ್ನಾಲಿಗೆ ಚಾಚಿ ಲಕ್ಷಾಂತರ ರು. ನಷ್ಟವಾಗಿದೆ. ಮುಂಜಾನೆ ಸುಮಾರು ೪.೩೦ರ ಸಮಯದಲ್ಲಿ ಟೀ-ಡೇ ಶಾಪ್‌ನಲ್ಲಿ ಯುಪಿಎಸ್‌ನಲ್ಲಿ ಉಂಟಾದ ಸಣ್ಣ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಡೀ ಹೊಟೇಲ್ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಇಲ್ಲಿನ ಅಶೋಕ ನಗರದಲ್ಲಿ ಮುಂಜಾನೆ ನಡೆದಿದೆ.

ತಿಮ್ಮೇಗೌಡ ಎಂಬುವರಿಗೆ ಸೇರಿದ ಟೀ-ಡೇ ಕಾಫಿ ಶಾಪ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಟೀ-ಡೇ ಅಂಗಡಿ ಪಕ್ಕದಲ್ಲಿರುವ ಟೈಲ್ಸ್ ಅಂಗಡಿಗೂ ಬೆಂಕಿಯ ಕೆನ್ನಾಲಿಗೆ ಚಾಚಿ ಲಕ್ಷಾಂತರ ರು. ನಷ್ಟವಾಗಿದೆ. ಮುಂಜಾನೆ ಸುಮಾರು ೪.೩೦ರ ಸಮಯದಲ್ಲಿ ಟೀ-ಡೇ ಶಾಪ್‌ನಲ್ಲಿ ಯುಪಿಎಸ್‌ನಲ್ಲಿ ಉಂಟಾದ ಸಣ್ಣ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿದೆ. ಅಂಗಡಿಯಲ್ಲಿದ್ದ ಮೂರು ಫ್ರೀಜರ್, ೨ ಡಬಲ್ ಡೋರ್ ಫ್ರೀಜರ್, ಟೇಬಲ್‌ಗಳು, ಕುರ್ಚಿಗಳು, ಫ್ಯಾನ್, ಸ್ಯಾಂಡ್‌ವಿಚ್ ಗ್ರಿಲ್, ಸಿಲಿಂಡರ್‌ಗಳು, ಯುಪಿಎಸ್, ಸಿಸ್ಟಮ್, ಎಲೆಕ್ಟ್ರಿಕಲ್ ಸಾಮಗ್ರಿಗಳು ಮತ್ತು ಇತರೆ ಸಾಧನ ಸಲಕರಣೆಗಳು ಸುಟ್ಟು ಕರಕಲಾಗಿವೆ.

ಬೆಂಕಿಯ ಕೆನ್ನಾಲಿಗೆ ಪಕ್ಕದ ರಿಷಬ್ ಟೈಲ್ಸ್ ಮತ್ತು ಸ್ಯಾನಿಟರಿ ವೇರ್ಸ್‌ ಅಂಗಡಿಗೂ ಚಾಚಿದ ಪರಿಣ್ಮ ಅಲ್ಲಿದ್ದ ಪೈಪ್‌ಗಳು, ಡಿವಿಆರ್, ಲ್ಯಾಪ್‌ಟಾಪ್, ಪ್ರಿಂಟರ್, ಟ್ಯಾಂಕ್ಸ್, ಅಪೇಕ್ಸಿ, ಕೆಮಿಕಲ್ ಮತ್ತು ಪೀಠೋಪಕರಣಗಳು ಇತರೆ ಸಾಮಗ್ರಿಗಳು ಸುಟ್ಟುಹೋಗಿವೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ ಶಾಪ್ ಸಂಪೂರ್ಣ ಸುಟ್ಟುಹೋಗಿತ್ತು. ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ನೇತೃತ್ವದ ಸಿಬ್ಬಂದಿ ಸುಮಾರು ಎರಡೂವರೆ ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.

ಸ್ಥಳಕ್ಕೆ ಶಾಸಕ ಪಿ. ರವಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿ ಮಾಲೀಕ ತಿಮ್ಮೇಗೌಡ ಅವರಿಗೆ ಸಾಂತ್ವನ ಹೇಳಿದ್ದಾರೆ. ಕಾಫಿ ಶಾಪ್‌ಗೆ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಮಾಡಿದ್ದೇವು. ಆದರೆ, ಈಗ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ ಎಂದು ಮಾಲೀಕ ತಿಮ್ಮೇಗೌಡ ಅಳಲು ತೋಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಂಡ್ಯ ಪೂರ್ವಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.