ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿ ಮೂವರನ್ನು ಆವಲಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಗಂಡನನ್ನು ಉಸಿರುಗಟ್ಟಿಸಿ ಕೊಂದ ಪತ್ನಿ, ಆಕೆಯ ತಾಯಿ, ಪ್ರಿಯಕರ

-ಅನಾರೋಗ್ಯದಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದ ಪತಿ । ಪುತ್ರಿಯ ಆರೋಗ್ಯದಲ್ಲೂ ವ್ಯತ್ಯಾಸ । ಆರೈಕೆ ಮಾಡಿ ಮಾಡಿ ಬೇಸತ್ತಿದ್ದ ಪತ್ನಿ-ಉಪಚಾರಕ್ಕೆ ಬಂದ ವ್ಯಕ್ತಿ ಜತೆ ಪತ್ನಿಗೆ ಅಕ್ರಮ ಸಂಬಂಧ । ಗಂಡನ ಕೊಂದು ಸುಳ್ಳು ಕತೆ ಸೃಷ್ಟಿ । ಮರಣೋತ್ತರ ಪರೀಕ್ಷೇಲಿ ಸತ್ಯ ಬಯಲು ಕನ್ನಡ ಪ್ರಭ ವಾರ್ತೆ ಬೆಂಗಳೂರು

ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸೇರಿ ಮೂವರನ್ನು ಆವಲಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್‌ ನಿವಾಸಿ ಮುಬಾರಕ್‌ ಬಾಷಾ(40) ಕೊಲೆಯಾದವರು. ಕೃತ್ಯ ಎಸಗಿದ ಈಕೆಯ ಪತ್ನಿ ಶಾಹೀನಾ ಬಾನು, ಈಕೆಯ ತಾಯಿ ಹಸೀನಾ ಬಾನು ಮತ್ತು ಪ್ರಿಯಕರ ನಹೀಮ್‌ ಉದ್ದೀನ್‌ ಖುರೇಶಿಯನ್ನು ಬಂಧಿಸಲಾಗಿದೆ.

ಸೆ.9 ರಂದು ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್‌ನಲ್ಲಿ ಈ ಘಟನೆ ನಡೆದಿತ್ತು. ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

20 ವರ್ಷಗಳ ಹಿಂದೆ ಮುಬಾರಕ್ ಬಾಷಾ ಹಾಗೂ ಶಹೀನಾ ಬಾನು ಅವರ ವಿವಾಹವಾಗಿತ್ತು. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಈ ನಡುವೆ ಎರಡು ವರ್ಷಗಳ ಹಿಂದೆ ಮುಬಾರಕ್‌ ಪಾರ್ಶ್ವವಾಯುಗೆ ತುತ್ತಾದರು. ನಂತರ ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರಿಂದ ಊಟ ಮಾಡಿಸುವುದು, ಆರೈಕೆ ಮಾಡುವುದು ಶಹೀನಾಗೆ ತೀವ್ರ ಕಿರಿಕಿರಿ ಉಂಟು ಮಾಡಿತ್ತು. ಅಲ್ಲದೆ, ಪುತ್ರಿ ಕೂಡ ಅನಾರೋಗ್ಯಕ್ಕೀಡಾಗಿದ್ದರಿಂದ ಆಕೆಯ ಆರೈಕೆಯೂ ಈಕೆಗೆ ಬೇಸರ ತರಿಸಿತ್ತು.

ಈ ನಡುವೆ ಪುತ್ರಿಯ ಆರೈಕೆಗಾಗಿ ಬಂದಿದ್ದ ನಹೀಮ್‌ ಉದ್ದೀನ್‌ ಖುರೇಶಿ ಜತೆ ಹಂತ-ಹಂತವಾಗಿ ಶಾಹೀನಾ ಬಾನು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು. ಈ ಸಂದರ್ಭದಲ್ಲಿಯೇ ನಹೀಮ್‌, ಮುಬಾರಕ್‌ ಬಾಷಾನ ಹತ್ಯೆಗೈಯಲು ಶಾಹೀನಾ ಬಾನುಗೆ ಸೂಚಿಸಿದ್ದ. ಈ ವಿಚಾರವನ್ನು ತನ್ನ ತಾಯಿ ಹಸೀನಾಗೆ ತಿಳಿಸಿದ್ದಾಳೆ. ನಂತರ ಮೂವರು ಸೇರಿ ಮುಬಾರಕ್‌ ಬಾಷಾನ ಕೊಲೆಗೆ ಸಂಚು ರೂಪಿಸಿದ್ದಾರೆ. ಅದರಂತೆ ಸೆ.9ರಂದು ತಡರಾತ್ರಿ ಮಲಗಿದ್ದ ಮುಬಾರಕ್‌ ಬಾಷಾನನ್ನು ಮೂವರು ಸೇರಿ ಉಸಿರುಗಟ್ಟಿಸಿ ಹತ್ಯೆಗೈಯಲು ಮುಂದಾಗಿದ್ದು, ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು, ಆತನ ಖಾಸಗಿ ಭಾಗ, ಮುಖಕ್ಕೆ ಜೋರಾಗಿ ಹೊಡೆದು ಹತ್ಯೆಗೈದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೃದಯಘಾತ ಎಂದು ಕಥೆ:

ಕೃತ್ಯ ಎಸಗಿದ ಬಳಿಕ ಆರೋಪಿ ಶಾಹೀನಾ ಬಾನು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಪತಿ ಮೃತಪಟ್ಟಿದ್ದಾರೆ ಎಂದು ಕಥೆ ಸೃಷ್ಟಿಸಿದ್ದರು. ಆದರೆ, ಸ್ಥಳಕ್ಕೆ ಬಂದ ಆತನ ಸಂಬಂಧಿಕರು ಮೃತದೇಹ ಕಂಡು ಅನುಮಾನಗೊಂಡಿದ್ದರು. ಅಲ್ಲದೆ, ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಸಂಬಂಧ ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಮರಣೋತ್ತರ ವರದಿಯಿಂದ ಕಳ್ಳಾಟ ಬಯಲು:

ಮರಣೊತ್ತರ ವರದಿಯಲ್ಲಿ ಮೂಗು, ಗಲ್ಲ ಹಾಗೂ ಖಾಸಗಿ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಶಾಹೀನಾ ಬಾನು ವಿಚಾರಣೆ ನಡೆಸಿದಾಗ, ಅನಾರೋಗ್ಯ ಪೀಡಿದ ಪುತ್ರಿ ಜತೆಗೆ ಪತಿಯೂ ಪಾರ್ಶ್ವವಾಯುಗೆ ತುತ್ತಾಗಿದ್ದರಿಂದ ಬೇಸರಗೊಂಡಿದ್ದೆ. ಆ ವೇಳೆ ನಹೀಮ್‌ ಸೂಚನೆ ಮೇರೆಗೆ ಪತಿಯನ್ನು ಹತ್ಯೆಗೈಯಲಾಗಿತ್ತು ಎಂದು ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.