ರಾಜ್ಯಾದ್ಯಂತ ಬರ ಆವರಿಸಿದ್ದು, ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಗದಗದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಮುಳಗುಂದ (ಗದಗ) : ರಾಜ್ಯಾದ್ಯಂತ ಬರ ಆವರಿಸಿದ್ದು, ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಗದಗದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ್ದು, ಅ.10ರ ಒಳಗೆ ಗದಗ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಬಸಾಪೂರ ಕ್ರಾಸ್‌ನಲ್ಲಿ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದ್ದಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ರೈತ ಸಂಘ ಹಾಗೂ ಹಲವು ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಶಾಸಕರು ಮಾತನಾಡಿದರು.
ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿದ್ದೇವು. ಬರಪೀಡಿದ ಪ್ರದೇಶವೆಂದು ಸ್ಪಷ್ಟವಾದ ಚಿತ್ರಣ ನಮ್ಮದಾಗಿತ್ತು. ಅಧಿಕಾರಿಗಳ ವರದಿ ಬಳಿಕ ಖುದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಧಾವಿಸಿ ಬಂದಿದ್ದರು. ಸಿಎಂ ಡಿ.ಕೆ. ಶಿವಕುಮಾರ್ ಅವರು ಕದಾಂಪೂರದಿಂದ ಕುರ್ತಕೋಟಿವರೆಗೆ ಬೆಳೆ ವೀಕ್ಷಣೆ ಮಾಡಿದ್ದರು. ಇಷ್ಟಾದರೂ ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿಲ್ಲ. ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಿರ್ಲಕ್ಷ ವಹಿಸಿರುವುದು ಬೇಸರದ ಸಂಗತಿಯಾಗಿದೆ.
ಗದಗ ಜಿಲ್ಲೆಯ ಬರಗಾಲದ ಕುರಿತು ಹಿರಿಯ ರಾಜಕಾರಣಿಯಾಗಿ, ಹಿರಿಯ ಶಾಸಕನಾಗಿ ಮನವಿ ಮಾಡಿಕೊಳುತ್ತೇನೆ. ಮುಖ್ಯಮಂತ್ರಿಗಳು ಸ್ವತಃ ಪರಿಶೀಲಿಸಿದ್ದು, ನಿಮ್ಮ ಕಣ್ಣು ನಿಮಗೆ ಸುಳ್ಳು ಹೇಳುತ್ತವೆಯೇ? ನೀವೇ ಪರಿಶೀಲನೆ ನಡೆಸಿದ ಮೇಲೂ ಬರಗಾಲವೆಂದು ಘೋಷಣೆ ಮಾಡುವ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಅನ್ಯಾಯದ ಪರಮಾವಧಿ. ರೈತರಿಗೆ ಮಾಡಿದ ಮೋಸವಾಗಿದ್ದು, ಬ್ರಿಟಿಷ್ ಮನಸ್ಥಿತಿಯ ಅಧಿಕಾರಿಶಾಹಿಗಳ ಸುಳ್ಳು ವರದಿ ನಂಬದೆ ತಕ್ಷಣ ರೈತರ ಸಂಕಷ್ಟಕ್ಕೆ ಸರ್ಕಾರ ಧಾವಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ಹೆಗಲಿಗೆ ಬಾರಕೋಲು ಹಾಕಿಕೊಂಡು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರು ರೊಚ್ಚಿಗೆದ್ದು ಹೋರಾಟ
ರೈತರು ರೊಚ್ಚಿಗೆದ್ದು ಹೋರಾಟ ಮಾಡುತ್ತಿದ್ದಾರೆ. ಗದಗ ತಾಲೂಕಿನಲ್ಲಿಯೇ ಶೇ.49ರಷ್ಟು ಮಳೆ ಕೊರತೆ ಆಗಿದೆ. ಬರ ಪೀಡಿತ ಪ್ರದೇಶವೆಂದು ಏಕೆ ಘೋಷಿಸಿಲ್ಲ ? ಬರ ಘೋಷಣೆ ಮಾಡಲು ಅಡ್ಡಿ ಆದವರು ಯಾರು..? ಅನ್ಯಾಯ, ಮೋಸ ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ರೈತ ಪರ ಇದ್ದವನು. ರೈತ ಕುಟುಂಬದಿಂದ ಬಂದವನು. ರೈತರ ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ. ಮೂರು ದಿನದಲ್ಲಿ ಬರಪೀಡಿತ ಎಂದು ಘೋಷಣೆ ಮಾಡಲು ಏನು ಪ್ರಯತ್ನ ಬೇಕು ಮಾಡುತ್ತೇನೆ. ಅದು ಸಾಧ್ಯವಾಗದೆ ಹೋದರೆ ಅ.10 ಗಡುವನ್ನು ಶಾಸನ ಸಭೆಯ ಮೂಲಕ ಸರ್ಕಾರಕ್ಕೆ ಕೊಡುತ್ತೇನೆ ಎಂದು ಪುನರುಚ್ಛರಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ 73 ತಾಲೂಕುಗಳಿವೆ. 73ರಲ್ಲಿ ಇನ್ನೂ 27 ತಾಲೂಕುಗಳನ್ನು ಬರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಇನ್ನುಳಿದ 27 ತಾಲೂಕು ಬರಪೀಡಿತ ತಾಲೂಕು ಘೋಷಣೆ ಮಾಡಬೇಕು. ಇದರಲ್ಲಿ ಅನವಶ್ಯಕ ರಾಜಕಾರಣ ಬೇಡ. ಅಕಸ್ಮಾತ್ ರಾಜಕಾರಣ ಕೂಡಿದರೆ ಅದನ್ನು ಭೇದಿಸಿ ಹೋಗುವ ಶಕ್ತಿ ನನ್ನಲ್ಲಿದೆ ಎಂದರು.
ಗದಗವನ್ನು ಬರಪೀಡಿತ ಎಂದು ಘೋಷಿಸುವಂತೆ ಭಾನುವಾರ ರೈತ ಸಂಟನೆಗಳ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗದಗದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಚ್.ಕೆ.ಪಾಟೀಲ್
ಖುದ್ದು ಸಿಎಂ ಡಿಕೆಶಿಯವರೇ ಬರ ಪರಿಶೀಲನೆ ನಡೆಸಿದ್ದರೂ ಪಟ್ಟಿಗೆ ಸೇರಿಸಿಲ್ಲ ಎಂದು ಆಕ್ರೋಶ
ನಿಮ್ಮ ಕಣ್ಣುಗಳೇ ನಿಮಗೆ ಸುಳ್ಳು ಹೇಳುತ್ತವೆಯೇ ಎಂದು ಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರಶ್ನೆ
ಬರ ಪಟ್ಟಿಯಿಂದ ಕೈಬಿಟ್ಟಿರುವುದು ಅನ್ಯಾಯದ ಪರಮಾವಧಿ: ತಮ್ಮದೇ ಸರ್ಕಾರದ ಬಗ್ಗೆ ಕಿಡಿ

