ವಿಧಾನಮಂಡಲ ಉಭಯ ಸದನಗಳ ಮೂರು ದಿನಗಳ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಪಶ್ಚಿಮಘಟ್ಟದ ಕುರಿತು​​ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಹಾಗೂ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ

ಬೆಂಗಳೂರು : ವಿಧಾನಮಂಡಲ ಉಭಯ ಸದನಗಳ ಮೂರು ದಿನಗಳ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಪಶ್ಚಿಮಘಟ್ಟದ ಕುರಿತು​​ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಹಾಗೂ ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಜು.20 ರಿಂದ ಆ.13ರವರೆಗೆ ಮಳೆಗಾಲದ ಅಧಿವೇಶನ ನಡೆದಿತ್ತು. ಆದರೆ ಪ್ರತಿಪಕ್ಷಗಳು ಸಚಿವರಾಗಿದ್ದ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದ್ದರಿಂದ ಬರಗಾಲ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ರೈತರ ಸಮಸ್ಯೆ ಸೇರಿ ಯಾವುದೇ ವಿಚಾರಗಳೂ ಆಗ ಚರ್ಚೆಯಾಗಿರಲಿಲ್ಲ.

ಇದರ ನಡುವೆ ಕಸ್ತೂರಿರಂಗನ್ ಸಮಿತಿ ವರದಿ ಆಧರಿಸಿ ಪಶ್ಚಿಮಘಟ್ಟ ಪ್ರದೇಶದ 20,668 ಚ.ಕಿಮೀ. ಪ್ರದೇಶದಲ್ಲಿನ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಇದರಿಂದ ಆ ಭಾಗದ ಜನರ ಬದುಕು ಅತಂತ್ರವಾಗಲಿದ್ದು, ಈ ಬಗ್ಗೆ ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಅಧಿಸೂಚನೆ ವಿರುದ್ಧ ನಿರ್ಣಯ ಮಂಡಿಸಿ ಕಳುಹಿಸಲು ಸರ್ಕಾರ ತೀರ್ಮಾನಿಸಿದೆ.

ಎರಡು ವಿಚಾರ ಮಾತ್ರ ಚರ್ಚೆ:

ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಶುರುವಾಗಲಿರುವ ಅಧಿವೇಶನದಲ್ಲಿ ಬರಗಾಲ ಹಾಗೂ ಪಶ್ಚಿಮಘಟ್ಟಗಳ ವಿಚಾರದಲ್ಲಿ ಮಾತ್ರ ಚರ್ಚೆ ನಡೆಯಲಿದೆ. ಕಲಾಪ ಪಟ್ಟಿಯಲ್ಲಿ ಬೇರೆ ಯಾವುದೇ ವಿಚಾರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರ ವಿರುದ್ಧ ಸಮರಕ್ಕೆ ಸಿದ್ಧತೆ:

ಮತ್ತೊಂದೆಡೆ ಪ್ರತಿಪಕ್ಷಗಳು, ರಾಜ್ಯದಲ್ಲಿ ಬರಗಾಲ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇದರಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್‌ ಸಮಸ್ಯೆ, ಬರ ಘೋಷಣೆಯಲ್ಲಿ ನಡೆಸಿದ ತಾರತಮ್ಯ, ಗ್ಯಾರಂಟಿಗಳಿಗೆ ಹಾಕಿರುವ ಕತ್ತರಿ, ಪಿಂಚಣಿ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿದೆ.

ಆಡಳಿತಾರೂಢ ಕಾಂಗ್ರೆಸ್‌ನವರು ಕೇಂದ್ರದಿಂದ ಬರ ಪರಿಹಾರಕ್ಕೆ ತ್ವರಿತ ಸ್ಪಂದನೆ ಸಿಗದಿರುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಜತೆಗೆ ಕಸ್ತೂರಿ ರಂಗನ್‌ ವರದಿ ಅನ್ವಯ ಮಾಡಿರುವ ಅಧಿಸೂಚನೆಯಿಂದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಿಗೆ ಆಗುವ ಹಾನಿಯನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಯಿಂಟರ್‌

- ರಾಜ್ಯದಲ್ಲಿ ತೀವ್ರ ಬರಗಾಲ. ಗದ್ದಲದ ಕಾರಣ ಮುಂಗಾರು ಅಧಿವೇಶನದಲ್ಲಿ ಚರ್ಚೆ ಆಗಿರಲಿಲ್ಲ

- ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದಲ್ಲಿ ಬರ ಹಾಗೂ ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚೆ

- ಪಶ್ಚಿಮ ಘಟ್ಟ ವ್ಯಾಪ್ತಿಯ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಣೆ

- ಈ ಕುರಿತು ಕರಡು ಅಧಿಸೂಚನೆ ಹೊರಡಿಸಿರುವ ಕೇಂದ್ರ, ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ

- ಕೇಂದ್ರದ ಈ ಕ್ರಮದಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಜನರ ಬದುಕು ಅತಂತ್ರವಾಗುವ ಆತಂಕ

- ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ಅಧಿಸೂಚನೆ ವಿರುದ್ಧ ನಿರ್ಣಯ ಮಂಡಿಸಲು ತೀರ್ಮಾನ