ಬೆಂಗಳೂರು : ಐಟಿ ರಫ್ತಿನಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರು ನಗರಕ್ಕೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಇದರ ಪರಿಣಾಮವಾಗಿ 2014ರಲ್ಲಿ ಕೇವಲ 17 ಕಿ.ಮೀ.ನಷ್ಟಿದ್ದ ನಮ್ಮ ಮೆಟ್ರೋ ಇಂದು 100 ಕಿ.ಮೀ.ಗಳಿಗಿಂತ ಹೆಚ್ಚಿನ ದೂರಕ್ಕೆ ವಿಸ್ತರಣೆಯಾಗಿದ್ದು, ಕೇಂದ್ರದ ನೆರವಿನಿಂದಾಗಿಯೇ ‘ಮೆಟ್ರೋ ಸೆಂಚುರಿ’ ಬಾರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಶುಕ್ರವಾರ ನಗರದ ಕಾಳೇನ ಅಗ್ರಹಾರ-ತಾವರೆಕೆರೆ ನಡುವೆ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ನಂತರ ಐಐಎಂ-ಬಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 15,600 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ/ಚಾಲನೆ ನೀಡಿ ಮಾತನಾಡಿದ ಅವರು, ದೆಹಲಿ-ಎನ್ಸಿಆರ್, ಮುಂಬೈ ಮಹಾನಗರದ ನಂತರ 100 ಕಿ.ಮೀ. ಮೆಟ್ರೋ ಮೈಲಿಗಲ್ಲು ದಾಟಿದ ಭಾರತದ ಮೂರನೇ ನಗರವಾಗಿ ಈಗ ಬೆಂಗಳೂರು ಹೊರಹೊಮ್ಮಿದೆ. ಇದರಿಂದ ಸಾಫ್ಟ್ವೇರ್ ಕ್ಷೇತ್ರದ ಉದ್ಯೋಗಿಗಳೂ ಸೇರಿ ಮಧ್ಯಮ ವರ್ಗದವರ ಜೀವನ ಉತ್ತಮಗೊಳಿಸುವ ದೇಶದ ಬದ್ಧತೆ ಫಲವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.
ಬೆಂಗಳೂರು ಮೆಟ್ರೋದ ಹೊಸ ಪಿಂಕ್ ಲೈನ್ ಮಾರ್ಗ ಐಐಎಂ ಬೆಂಗಳೂರು, ಹಲವು ಶಿಕ್ಷಣ ಸಂಸ್ಥೆಗಳು, ನಗರದಲ್ಲಿರುವ ಪ್ರಮುಖ ವ್ಯಾಪಾರ, ಐಟಿ ಹಾಗೂ ಬಿಟಿ ವಾಣಿಜ್ಯ ಕೇಂದ್ರಗಳ ನಡುವಿನ ಸಂಚಾರ ವ್ಯವಸ್ಥೆ ಸುಧಾರಿಸಲಿದೆ. ಬೆಂಗಳೂರಿನ ಲಕ್ಷಾಂತರ ಜನರ ಪ್ರಯಾಣಕ್ಕೆ ಅನುಕೂಲವಾಗುವುದು ಮಾತ್ರವಲ್ಲದೆ, ಅವರ ಹಣ ಮತ್ತು ಸಮಯ ಉಳಿತಾಯವಾಗಲಿದೆ. ನಮ್ಮ ಮೆಟ್ರೋ ಯಶಸ್ಸು ಕೇವಲ ಒಂದೇ ಯೋಜನೆಗೆ ಸೀಮಿತವಾಗಿಲ್ಲ, ಇದು ಸುಗಮ ಜೀವನ ಮತ್ತು ಸುಗಮ ಪ್ರಯಾಣದ ಕುರಿತು ದೇಶದ ಹೊಸ ದೃಷ್ಟಿಕೋನದ ಪ್ರಬಲ ಪ್ರತಿಫಲನವಾಗಿದೆ ಎಂದರು.
ಅನುದಾನ 9 ಪಟ್ಟು ಹೆಚ್ಚಳ:
2014ರಿಂದ ಇಲ್ಲಿಯವರೆಗೆ ಭಾರತದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಾಗಿದ್ದು, ಕರ್ನಾಟಕದ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದ ಪ್ರಧಾನಿ ಮೋದಿ ಅವರು, ಕರ್ನಾಟಕವು ತನ್ನ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಪಡೆದ ಕೆಲವೇ ದಿನಗಳಲ್ಲಿ ಇಂದು ನಾಲ್ಕು ಅಮೃತ ನಿಲ್ದಾಣಗಳು, ಎರಡು ದ್ವಿಪಥ ಮತ್ತು ವಿದ್ಯುದ್ದೀಕರಣ ಯೋಜನೆಗಳು ಹಾಗೂ ಕರ್ನಾಟಕವನ್ನು ಗೋವಾದೊಂದಿಗೆ ಬೆಸೆಯುವ ಹೊಸ ವಂದೇ ಭಾರತ್ ರೈಲು ಪಡೆದುಕೊಂಡಿದೆ ಎಂದು ವಿವರಿಸಿದರು.
ವಂದೇ ಭಾರತ್ ರೈಲುಗಳು ಮತ್ತು ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ಸೇರಿ ಕರ್ನಾಟಕದ 60 ಕ್ಕೂ ಹೆಚ್ಚು ನಿಲ್ದಾಣಗಳನ್ನು ಒಳಗೊಂಡ ಅಮೃತ ಭಾರತ್ ನಿಲ್ದಾಣಗಳು ಭಾರತದ ವಿಶಿಷ್ಟ ಗುರುತು ಹೊಂದಿವೆ ಎಂದರು.
ಅಲ್ಲದೆ, ಈ ರೈಲಿನ ಮೂಲಕ, ಮಂಗಳೂರು ಸೇರಿ ಕರ್ನಾಟಕದ ಇಡೀ ಕರಾವಳಿ ಮಾರ್ಗದ ಸಹಪ್ರಯಾಣಿಕರಿಗೆ ಸೆಮಿಹೈ-ಸ್ಪೀಡ್ ರೈಲಿನ ಹೊಸ ಅನುಭವ ಸಿಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 40,000 ಕುಟುಂಬಗಳಿಗೆ ಮನೆಗಳಲ್ಲಿ ಛಾವಣಿ ಸೌರ ಸ್ಥಾವರ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯಿಂದಾಗಿ ವಿದ್ಯುತ್ ಬಳಸುವ ಕುಟುಂಬಗಳು ಸ್ವತಃ ವಿದ್ಯುತ್ ಉತ್ಪಾದಿಸಿ ಆದಾಯ ಗಳಿಕೆಯ ಹೊಸ ಹಾದಿಯಲ್ಲಿ ನಡೆಯಲಿವೆ ಎಂದರು.
ಇದಲ್ಲದೆ, ವಿದ್ಯುತ್ ವೆಚ್ಚ ಕಡಿತಗೊಳಿಸಿ ಹೊಸ ಆದಾಯ ಹಾಗೂ ಉದ್ಯೋಗ ಸೃಷ್ಟಿಸಲು ಪಿಎಂ ಕುಸುಮ್ ಯೋಜನೆಯಡಿ ರಾಜ್ಯದ ರೈತರಿಗೆ 8 ಲಕ್ಷಕ್ಕೂ ಹೆಚ್ಚು ಸೌರ ಪಂಪ್ಗಳ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರೊಂದಿಗೆ ಕರ್ನಾಟಕದ ಅನ್ನದಾತರು ಈಗ ಊರ್ಜಾದಾತರಾಗಿಯೂ ಬದಲಾಗುತ್ತಿದ್ದಾರೆ ಎಂದು ಮೋದಿ ಬಣ್ಣಿಸಿದರು.
ಪ್ರಧಾನಿ ಹೇಳಿದ್ದೇನು?
- 2014ರಲ್ಲಿ ಕೇವಲ 17 ಕಿ.ಮೀ.ನಷ್ಟಿದ್ದ ನಮ್ಮ ಮೆಟ್ರೋ
- ಇಂದು 100 ಕಿ.ಮೀ.ಗಳಿಗಿಂತ ಹೆಚ್ಚಿನ ದೂರಕ್ಕೆ ವಿಸ್ತರಣೆ
- ಈ ಮೈಲಿಗಲ್ಲು ದಾಟಿದ ದೇಶದ 3ನೇ ನಗರ ಬೆಂಗಳೂರು
- ಕೇಂದ್ರದ ನೆರವಿಂದ ಮೆಟ್ರೋ ಸಾಧನೆ ಎತ್ತರಕ್ಕೆ: ಪ್ರಧಾನಿ
- ಪಿಂಕ್ ಲೈನ್ ಉದ್ಘಾಟನೆಯ ವೇಳೆ ಪ್ರಧಾನಿ ಪ್ರತಿಪಾದನೆ
ಮಂಗಳೂರಿನ ಎಲ್ಪಿಜಿ ಘಟಕದಿಂದ ಸ್ವಾವಲಂಬನೆ
ಬೆಂಗಳೂರು: ಮಂಗಳೂರಿನಲ್ಲಿ ತಾವು ಉದ್ಘಾಟಿಸಿದ ದೇಶದ ಅತಿದೊಡ್ಡ ಭೂಗತ ತೈಲ ಸಂಗ್ರಹಾಗಾರದಿಂದ ದೇಶದ ಎಲ್ಪಿಜಿ ಸಂಗ್ರಹ ಸಾಮರ್ಥ್ಯವನ್ನು 80,000 ಮೆಟ್ರಿಕ್ ಟನ್ಗಳಷ್ಟು ಹೆಚ್ಚಿಸುತ್ತದೆ. ಯುದ್ಧದಂಥ ಆಪತ್ಕಾಲದಲ್ಲಿ ಇದು ನೆರವಾಗಲಿದೆ. ಸ್ವಾವವಲಂಬನೆ ಸಾಧ್ಯವಾಗಲಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಸತತ ಸೆಂಚುರಿ ಶಿವಕುಮಾರ್ಜೀ
ನಾವು ಸತತವಾಗಿ ಸಂಚುರಿ ಹೊಡೆಯುತ್ತಿದ್ದೇವೆ ಶಿವಕುಮಾರ್ ಜೀ. 2014ರಲ್ಲಿ ನಮ್ಮ ಬೆಂಗಳೂರು ಮೆಟ್ರೋ 17 ಕಿ.ಮೀ ಉದ್ದವಿತ್ತು. ಇಂದು 100 ಕಿ.ಮೀ. ದಾಟಿ ಸೆಂಚುರಿ ಬಾರಿಸಿದೆ.
- ನರೇಂದ್ರ ಮೋದಿ, ಪ್ರಧಾನಿ
