ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾಸ್ಮೋಸ್ ಮೈಸೂರು ತಾರಾಲಯವನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು:
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾಸ್ಮೋಸ್ ಮೈಸೂರು ತಾರಾಲಯವನ್ನು ಉದ್ಘಾಟಿಸಿದರು.ಬಳಿಕ, ತಾರಾಲಯವನ್ನು ಸಂಪೂರ್ಣವಾಗಿ ಅವಲೋಕಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾರಾಲಯದ ಸಂಪೂರ್ಣ ಮಾಹಿತಿಯನ್ನು ಮೋದಿಗೆ ವಿವರಿಸಿದರು. ಬಳಿಕ, ತಾರಾಲಯದ ವಾಲಿದ ಗುಮ್ಮಟಾಕಾರದ ಸಭಾಂಗಣದಲ್ಲಿ ಕುಳಿತು ಕೆಲಕಾಲ ಆಕಾಶದ ವಿಸ್ಮಯವನ್ನು ವೀಕ್ಷಿಸಿದರು. ನಾಸಾದ ಉಪಗ್ರಹದ ಮೂಲಕ ಭಾರತದ ವೀಕ್ಷಣೆ, ಚಂದ್ರನನ್ನು ವೀಕ್ಷಿಸಿದರು.
ಈ ವೇಳೆ ಮೋದಿಗೆ ರಾಜ್ಯಪಾಲೆ ಡಾ.ಸುಧಾ ಯಾದವ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಥ್ ನೀಡಿದರು. ಬಳಿಕ, ತಾರಾಲಯದ ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಾರಾಲಯ ಹೇಗಿದೆ? ಎಂದು ಪ್ರಶ್ನಿಸಿ ವಿದ್ಯಾರ್ಥಿಗಳ ಅನಿಸಿಕೆ ತಿಳಿದರು. ನಂತರ, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಟನ್ ಒತ್ತುವ ಮೂಲಕ ತಾರಾಲಯ ಲೋಕಾರ್ಪಣೆಗೆ ಅಧಿಕೃತ ಮುದ್ರೆ ಒತ್ತಿದರು.ಕುಸಿದ ಬಿದ್ದ ಮಹಿಳೆಯನ್ನು ಉಪಚರಿಸಿದ ಮೋದಿ:ಶುಕ್ರವಾರ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕಾದು ನಿಂತಿದ್ದ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಸಂತೋಷ ತಾಳಲಾರದೆ ಕುಸಿದು ಬಿದ್ದ ಘಟನೆ ನಗರದ ಕಾಸ್ಮೋಸ್ ತಾರಾಲಯದ ಆವರಣದಲ್ಲಿ ನಡೆದಿದ್ದು, ಪ್ರಧಾನಿ ಮೋದಿ ಅವರ ಸೂಚನೆಯಂತೆ ಸ್ಥಳದಲ್ಲಿಯೇ ಅವರಿಗೆ ಅಗತ್ಯ ಉಪಚಾರ ನೀಡಲಾಯಿತು.ಕಾಸ್ಮೋಸ್ ತಾರಾಲಯ ಉದ್ಘಾಟನೆಗೆ ಆಗಮಿಸಿದ್ದ ಮೋದಿಯನ್ನು ಸ್ವಾಗತಿಸಲು ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. 20 ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಪೈಕಿ, ನಂಜನಗೂಡು ಪುರಸಭೆಯ ಮಾಜಿ ಸದಸ್ಯೆ ಕೆ.ಪ್ರೇಮಾ ಅವರು ಮೋದಿಯನ್ನು ನೋಡಿದ ಖುಷಿಯಲ್ಲಿ ಕುಸಿದು ಬಿದ್ದರು. ಇದನ್ನು ಗಮನಿಸಿದ ಮೋದಿಯವರು ಕೂಡಲೇ ತಮ್ಮ ತಂಡದವರಿಗೆ ಅವರ ಆರೋಗ್ಯ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಅವರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರೇಮಾ ಅವರನ್ನು ಮಾತನಾಡಿಸಿ, ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿ, ಕುಡಿಯಲು ನೀರು ಕೊಟ್ಟು ಉಪಚರಿಸಿದರು.ಅಲ್ಲದೆ, ತಮ್ಮ ಸಹಾಯಕರ ಮೂಲಕ ಕೆ.ಪ್ರೇಮಾ ಅವರ ಮೊಬೈಲ್ ನಂಬರ್ ಪಡೆದು ಅವರ ಆರೋಗ್ಯ ವಿಚಾರಿಸಿಕೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮ ಮುಗಿಸಿ ತೆರಳುವಾಗಲೂ ಪ್ರೇಮಾ ಅವರನ್ನು ಕಂಡು ಮಾತನಾಡಿಸಿ ತೆರಳಿದರು.ಸಂಶೋಧನಾ ಕ್ಷೇತ್ರ ಬಲವರ್ಧನೆಗೆ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಸ್ಕೀಂ:
ಕಳೆದ ವರ್ಷ ನಾವು ಒಂದು ಲಕ್ಷ ಕೋಟಿ ರೂ.ವೆಚ್ಚದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ಯೋಜನೆ ಆರಂಭಿಸಿದ್ದೇವೆ. ಸಂಶೋಧನಾ ಕ್ಷೇತ್ರವನ್ನು ಬಲಪಡಿಸಲು ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಜಗತ್ತಿನ ಅತ್ಯುತ್ತಮ ಸಂಶೋಧನಾ ಸೌಲಭ್ಯಗಳು ಹಾಗೂ ವೈಜ್ಞಾನಿಕ ಪ್ರಕಟಣೆಗಳನ್ನು ತಲುಪಿಸುವುದು ಅಗತ್ಯ. ಈ ಉದ್ದೇಶದಿಂದ ನಾವು ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆ ಆರಂಭಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ಭಾರತದ ಮೊದಲ ಟಿಲ್ಟೆಡ್ ತಾರಾಲಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ವಿಜ್ಞಾನವು ಸಮಾಜಕ್ಕಾಗಿ, ಸಮಾಜದ ಅಭಿವೃದ್ಧಿಗಾಗಿ ಎಂಬುದೇ ನಮ್ಮ ಚಿಂತನೆ. ಈ ನಿಟ್ಟಿನಲ್ಲಿ ಕಾಸ್ಮೋಸ್ ತಾರಾಲಯ ವಿದ್ಯಾರ್ಥಿಗಳ ವೈಜ್ಞಾನಿಕ ಮನಸ್ಸುಗಳಿಗೆ ವೇದಿಕೆ ಒದಗಿಸಲಿದೆ ಎಂದರು. ನಾವು ಅನುಸಂಧಾನ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಸ್ಥಾಪಿಸಿದ್ದೇವೆ. ಇದರ ಮೂಲಕ ಹೆಚ್ಚಿನ ಸಂಖ್ಯೆಯ ನಾವೀನ್ಯಪೂರ್ಣ ಸಂಶೋಧಕರಿಗೆ ಹೊಸ ಸಂಶೋಧನೆ ಕೈಗೊಳ್ಳಲು ನೆರವು ನೀಡುತ್ತಿದ್ದೇವೆ. ಇದರಿಂದ ಹೊಸ ತಂತ್ರಜ್ಞಾನವನ್ನು ಪ್ರಯೋಗಾಲಯಗಳ ಮಟ್ಟದಿಂದ ಹೊರ ತಂದು, ಪ್ರಾಯೋಗಿಕವಾಗಿ ಜನರ ಉಪಯೋಗಕ್ಕೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.ಕಳೆದ ವರ್ಷ ಭಾರತದಲ್ಲಿ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ನ್ನು ಆಯೋಜಿಸಲಾಗಿತ್ತು. ಇದರಲ್ಲಿ ನಮ್ಮ ಯುವ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಈ ವರ್ಷ ಇದೇ ಒಲಿಂಪಿಯಾಡ್ ನ ಮುಂದಿನ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದ ಐವರು ವಿದ್ಯಾರ್ಥಿಗಳು ವಿಯೆಟ್ನಾಂಗೆ ತೆರಳಿದ್ದರು. ಅವರಲ್ಲಿ ನಾಲ್ವರು ಚಿನ್ನದ ಪದಕ ಹಾಗೂ ಒಬ್ಬರು ಬೆಳ್ಳಿ ಪದಕ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಆಧುನಿಕ ಉಪಗ್ರಹ, ತಂತ್ರಜ್ಞಾನ ಇಲ್ಲದೆ ಇರುವಾಗಲೂ ನಮ್ಮ ಪೂರ್ವಜರು ಆಕಾಶವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯನ್ನು ಅರ್ಥಮಾಡಿಕೊಂಡಿದ್ದರು. ಪಂಚಾಂಗಗಳನ್ನು ರಚಿಸಿದ್ದರು. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸಂಭವಿಸುವ ಸಮಯವನ್ನೂ ನಿಖರವಾಗಿ ಲೆಕ್ಕಾಚಾರ ಮಾಡುತ್ತಿದ್ದರು. ಭಾರತದಲ್ಲಿ ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯರಂತಹ ಅನೇಕ ಮಹಾನ್ ಖಗೋಳ ವಿಜ್ಞಾನಿಗಳು ಜನ್ಮತಾಳಿದ್ದಾರೆ ಎಂದು ಸ್ಮರಿಸಿದರು.