ರಾಜ್ಯದ 3-4 ಕಡೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಎಲ್ಲಿ, ಹೇಗೆ ನಡೆಸಬೇಕೆಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯದ 3-4 ಕಡೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಎಲ್ಲಿ, ಹೇಗೆ ನಡೆಸಬೇಕೆಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸಮಾವೇಶವನ್ನು ಎಲ್ಲಿ ನಡೆಸಬೇಕೆಂಬ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದಾರೆ. ಇದು ಐಕ್ಯತಾ ಸಮಾವೇಶವಾಗಿದ್ದು, ಚುನಾವಣೆಗೂ ಮುನ್ನ ಈ ಸಮುದಾಯಗಳಿಗೆ ಏನು ಮಾತು ನೀಡಿದ್ದೆವು, ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಸಮಾವೇಶದಲ್ಲಿ ತಿಳಿಸುತ್ತೇವೆ ಎಂದರು.

ಹಾಸ್ಟೆಲ್ ಹಾಗೂ ಶಾಲಾ ಸಮವಸ್ತ್ರಕ್ಕೆ ಹೊಸ ರೂಪ

ಹಾಸ್ಟೆಲ್ ಹಾಗೂ ಶಾಲಾ ಸಮವಸ್ತ್ರಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಿದ್ದೇವೆ. ಮುಂದಿನ ವರ್ಷದಿಂದ ಇವುಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳ ರೀತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಉತ್ತಮವಾದ ಸಮವಸ್ತ್ರವನ್ನು ಧರಿಸಲಿ. ಅದಕ್ಕೆ ಸ್ವಲ್ಪ ಹೆಚ್ಚಿನ ಹಣ ಬೇಕಾದರೆ ನೀಡಲಾಗುವುದು ಎಂದರು.

ಶೀಘ್ರ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ನಾಯಕರ ಸಭೆ:

ಸದ್ಯದಲ್ಲೇ ಅಲ್ಪಸಂಖ್ಯಾತ ಶಾಸಕರು ಹಾಗೂ ಸಚಿವರ ಸಭೆ ಕರೆದು ಚರ್ಚೆ ಮಾಡಲಿದ್ದು, ಅದೇ ರೀತಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರ ಜತೆಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಾಗುವುದು. ಅಧಿವೇಶನಕ್ಕೂ ಮುಂಚಿತವಾಗಿಯೇ ಚರ್ಚೆ ಮಾಡಲಾಗುವುದು ಎಂದು ಅವರು ತಿಳಿಸಿದರು.