ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕುಷ್ಟಗಿ: ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಹೋರಾಟಗಾರ ಬಸವರಾಜ ಗಾಣಿಗೇರ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಾಲೂಕಿನಲ್ಲಿ ಮಳೆ ಕೊರತೆ, ಕೃಷಿ ಚಟುವಟಿಕೆ ಮೇಲಿನ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ.ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಬರ ಪರಿಸ್ಥಿತಿಯನ್ನು ಪರಿಗಣಿಸಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಹಾಗೂ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಆಗ್ರಹವಾಗಿದೆ.
ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ನೀಡಸೇಸಿ ಪಶ್ಚಕಂತಿ ಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅವರು, ಹೋರಾಟಗಾರ ಬಸವರಾಜ ಗಾಣಿಗೇರ ಅವರಿಗೆ ಬೆಂಬಲ ಸೂಚಿಸಿ, ಆಶೀರ್ವಾದ ನೀಡಿದರು.ಸಮಾಜ ಸೇವಕ ಲಕ್ಷ್ಮೀಪತಿ ಹಿರೇಮಠ ಹಾಗೂ ಮುತ್ತಣ್ಣ ಹಕ್ಕಲ್ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕುಷ್ಟಗಿ ಪಟ್ಟಣದ ನಾಯಕವಾಡಿ ಓಣಿಯ ಯುವಕರು ಹಾಗೂ ರೈತ ಮುಖಂಡರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ದೊಡ್ಮನೆ ಅಭಿಮಾನಿಗಳ ಬಳಗ, ಕಾರ್ಗಿಲ್ ವೀರ ಯೋಧ ಮಲ್ಲಯ್ಯ ಯುವಕರ ಬಳಗ ಸೇರಿದಂತೆ ವಿವಿಧ ಯುವಕರ ಬಳಗಗಳು ಸಹ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಪಟ್ಟಣದ ಮೂರನೇ ವಾರ್ಡಿನ ಯುವಕರು ಕೂಡ ಸ್ಥಳಕ್ಕೆ ಆಗಮಿಸಿ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿದರು.
ವಿವಿಧ ಕನ್ನಡಪರ ಹಾಗೂ ರೈತಪರ ಸಂಘಟನೆಗಳ ಮುಖಂಡರು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಕನ್ನಡ ಸೇನೆಯ ಕೃಷ್ಣಮೂರ್ತಿ ಟೆಂಗುಂಟಿ ಹಾಗೂ ಬಾಳಪ್ಪ ಬೇವಿನಕಟ್ಟಿ ಅವರು ಹೋರಾಟಕ್ಕೆ ಬೆಂಬಲ ನೀಡಿ, ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಕರವೇ ಸ್ವಾಭಿಮಾನಿ ಬಣದ ದೇವರಾಜ ಹಜಾಳದ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಮೂಲಿಮನಿ ಹೋರಾಟಕ್ಕೆ ತಮ್ಮ ಸಹಕಾರ ಇರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹೋರಾಟ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ, ಕಿರಣಜ್ಯೋತಿ ಹಾಗೂ ಬಸವರಾಜ ತಿಮ್ಮಾಪುರ ಮಾತನಾಡಿ, ಸರ್ಕಾರ ಈ ಕುರಿತು ಗಂಭೀರವಾಗಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಹೋರಾಟ ಮುಂದುವರಿಯಲಿದೆ: ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಕುರಿತು ಸರ್ಕಾರ ತಕ್ಷಣ ಸ್ಪಂದಿಸಿ, ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಹೋರಾಟಗಾರರ ಬೇಡಿಕೆಗಳನ್ನು ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಹೋರಾಟಗಾರ ಬಸವರಾಜ ಗಾಣಿಗೇರ ಹೇಳಿದರು.