ಸವಣೂರಿನಲ್ಲಿ ನೀರಿಗಾಗಿ ನಡೆದ ದೊಂಬಿ ಗಲಾಟೆಯಲ್ಲಿ ರೈತರ ಸಾಕಷ್ಟು ದಾಖಲೆಗಳು ಸುಟ್ಟು ಹೋಗಿದ್ದರ ಪರಿಣಾಮವಾಗಿ ಸುಮಾರು 27 ವರ್ಷಗಳಿಂದ ನನೆಗುದಿಗೆ ಬಿದ್ದ ದಾಖಲೆಗಳನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಮೂಲ ದಾಖಲಾತಿ ಅಥವಾ ಅದೆ ಗ್ರಾಮದಲ್ಲಿ ಕುಳಿತು ಪಂಚರ ದಸ್ತು ತೆಗೆದುಕೊಂಡು ರೈತರ ಉತ್ತಾರದಲ್ಲಿ ಇರುವ ಹಲವಾರು ಶರತ್ತುಗಳನ್ನು ತೆಗೆದು ಹಾಕಿ ರೈತರ ಸಂಕಷ್ಟಗಳನ್ನು ದೂರ ಮಾಡಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.

ಸವಣೂರು: ಸವಣೂರಿನಲ್ಲಿ ನೀರಿಗಾಗಿ ನಡೆದ ದೊಂಬಿ ಗಲಾಟೆಯಲ್ಲಿ ರೈತರ ಸಾಕಷ್ಟು ದಾಖಲೆಗಳು ಸುಟ್ಟು ಹೋಗಿದ್ದರ ಪರಿಣಾಮವಾಗಿ ಸುಮಾರು 27 ವರ್ಷಗಳಿಂದ ನನೆಗುದಿಗೆ ಬಿದ್ದ ದಾಖಲೆಗಳನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ರೈತರ ಮನೆಗಳಿಗೆ ತೆರಳಿ ಮೂಲ ದಾಖಲಾತಿ ಅಥವಾ ಅದೆ ಗ್ರಾಮದಲ್ಲಿ ಕುಳಿತು ಪಂಚರ ದಸ್ತು ತೆಗೆದುಕೊಂಡು ರೈತರ ಉತ್ತಾರದಲ್ಲಿ ಇರುವ ಹಲವಾರು ಶರತ್ತುಗಳನ್ನು ತೆಗೆದು ಹಾಕಿ ರೈತರ ಸಂಕಷ್ಟಗಳನ್ನು ದೂರ ಮಾಡಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.

ಪಟ್ಟಣದ ಉಪ ವಿಭಾಗ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಹೋರಾಟಕ್ಕೆ ಮುಂದಾದರೆ, ಆಡಳಿತ ಪಕ್ಷದ ಶಾಸಕನಾಗಿ ನಾನೇ ಸ್ವತಃ ಜನರೊಂದಿಗೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗಲಿದೆ. ನೀರಿನ ಸಮಸ್ಯೆ ಎದುರಾದಲ್ಲಿ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಲಾಗುವುದು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಅಧಿಕಾರಿಗಳು ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸಿದಲ್ಲಿ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ಕರ್ನಾಟಕ ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಆಶೀರ್ವದಿಸಿದ ಜನರ ಸಮಸ್ಯೆ ಆಲಿಸಲು ಸರ್ಕಾರ ಅಧಿಕಾರಿಗಳ ತಂಡದೊಂದಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರು ಕಚೇರಿಗೆ ಅಲೆಯುವ ಬದಲಾಗಿ ಒಂದೇಸೂರಿನಡಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಜಾಸೇವೆ ಆಂದೋಲನ ಆಯೋಜನೆ ಹಮ್ಮಿಕೊಂಡಿದೆ. ಅರ್ಜಿ ಸ್ವೀಕರಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು 15 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ, ತಾಪಂ ಇಒ ಬಿ.ಎಸ್. ಶಿಡೇನೂರ, ಪ್ರಮುಖರಾದ ಗುಡ್ಡಪ್ಪ ಜಲದಿ, ಮಂಜುನಾಥ ಉಳಾಗಡ್ಡಿ, ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಮಾಂತೇಶ ಸಾಲಿ, ಮೌಲಾಸಾಬ ಹೊಂಬರಡಿ, ರವಿ ಕರಿಗಾರ, ಮಲ್ಲೇಶ ಹರಿಜನ, ನಾಗಪ್ಪ ತಿಪ್ಪಕ್ಕನವರ, ತಾಪಂ ಕೆಡಿಪಿ ಸರ್ವ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು. ಬಿಇಒ ಎಂ.ಎಫ್. ಬಾರ್ಕಿ ಹಾಗೂ ಶಿಕ್ಷಕ ವಿದ್ಯಾಧರ ಕುತನಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೇವಲ 22 ಅರ್ಜಿಗಳ ಸ್ವೀಕಾರ ಆಯಿತು. ಅವುಗಳಲ್ಲಿ ಯಾವುದೇ ಒಂದು ಸಮಸ್ಯೆಗೆ ಸಹ ಸ್ಥಳದಲ್ಲಿ ಪರಿಹಾರ ದೊರೆಯದೆ ಇರುವುದನ್ನು ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ ಶಪಿಸುತ್ತಾ ಹೊರ ನಡೆದ ಘಟನೆ ಕೂಡಾ ನಡೆಯಿತು.