ಕಾಖಂಡಕಿ ಮತ್ತು ಸುತ್ತಮುತ್ತಲಿನ ತಾಣಗಳು ಐತಿಹಾಸಿಕ ಹಿನ್ನೆಲೆಯ ಪುಣ್ಯಭೂಮಿಗಳಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಖಂಡಕಿ ಮತ್ತು ಸುತ್ತಮುತ್ತಲಿನ ತಾಣಗಳು ಐತಿಹಾಸಿಕ ಹಿನ್ನೆಲೆಯ ಪುಣ್ಯಭೂಮಿಗಳಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಭಾನುವಾರ ಹಣಮಂತ ದೇವರ ನೂತನ ದೇವಸ್ಥಾನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಖಂಡಕಿ ಮಹಿಪತಿದಾಸರ ಪುಣ್ಯಭೂಮಿ. ಪಕ್ಕದಲ್ಲಿರುವ ಹರಳಯ್ಯನ ಗುಂಡ ಕೂಡ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ತಾಣಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಣಮಂತ ದೇವರ ನೂತನ ದೇಗುಲ ನಿರ್ಮಾಣಕ್ಕೆ ಈಗಾಗಲೇ ₹50 ಲಕ್ಷ ವೈಯಕ್ತಿಕ ದೇಣಿಗೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ₹50 ಲಕ್ಷ ನೆರವು ನೀಡಲಾಗುವುದು. ಒಟ್ಟಾರೆಯಾಗಿ ₹1 ಕೋಟಿ ದೇಣಿಗೆಯನ್ನು ಈ ಪವಿತ್ರ ಕಾರ್ಯಕ್ಕೆ ಸಮರ್ಪಿಸುತ್ತಿರುವುದು ತೃಪ್ತಿ ತಂದಿದೆ. ಭಕ್ತಿ, ಶ್ರದ್ಧೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಈ ಪವಿತ್ರ ದೇವಾಲಯ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ, ಶೀಘ್ರ ಪೂರ್ಣಗೊಂಡು ಭಕ್ತಾದಿಗಳ ಸೇವೆಗೆ ಸಮರ್ಪಣೆಯಾಗಲಿ. ಹಣಮಂತ ದೇವರ ಕೃಪಾಕಟಾಕ್ಷ ಸರ್ವರ ಮೇಲಿರಲೆಂದು ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಸಚಿವರು, ಜಿಲ್ಲಾದ್ಯಂತ ನಾನಾ ದೇವಸ್ಥಾನಗಳು ಹಾಗೂ ಧಾರ್ಮಿಕ ಭವನಗಳ ನಿರ್ಮಾಣಕ್ಕೆ ಸರ್ಕಾರ ಹಾಗೂ ವೈಯಕ್ತಿಕವಾಗಿ ನೀಡಲಾದ ಕೊಡುಗೆ ಸ್ಮರಿಸಿದರು.ಗ್ರಾಮದ ಶಿವಯೋಗಿ ಸ್ವಾಮೀಜಿ ಹಾಗೂ ಯೋಗೇಶ್ವರಿ ಅಮ್ಮ ಮಾತನಾಡಿ, ಸಚಿವರ ಸಮಗ್ರ ಅಭಿವೃದ್ಧಿಯ ಕಾರ್ಯ ಹಾಗೂ ಜನಪರ ನಿಲುವನ್ನು ಶ್ಲಾಘಿಸಿದರು. ಇದೇ ವೇಳೆ ಸಚಿವರು ಶಿವಯೋಗೀಶ್ವರ ಶ್ರೀಗಳ, ಹಿಮಾಲಯದಿಂದ ಆಗಮಿಸಿದ್ದ ಸ್ವಾಮಿ ಹರಿಓಂ ಆನಂದ ಭಾರತಿ ಸ್ವಾಮೀಜಿ, ಶುಭಮುನಿ ರಮೇಶ ಸ್ವಾಮೀಜಿ, ಸ್ವಾಮಿ ಶಕ್ತಿಜೀ ಹಾಗೂ ಸ್ವಾಮಿ ಗುಣಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ನಿಜಲಿಂಗಯ್ಯ ಶಾಸ್ತ್ರಿ, ಮುಖಂಡರಾದ ನಿಂಗನಗೌಡ ಪಾಟೀಲ, ಉಮೇಶ ವಂದಾಲ, ರಾಜೇಂದ್ರಗೌಡ ಪಾಟೀಲ, ವಿ.ಎಸ್. ಪಾಟೀಲ, ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ವಿಠ್ಠಲ ಬಾಬಾನಗರ, ವಿಜಯಕುಮಾರ ಮೈಲಾರ, ಬಾಬುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹಾದೇವ ತಳವಾರ, ವಿದ್ಯಾರಾಣಿ ತುಂಗಳ, ಭುವನೇಶ್ವರಿ ಉಪಸ್ಥಿತರಿದ್ದರು.