ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ವಾಲ್ಮಿಕಿ ನಿಗಮದಲ್ಲಿ ₹187 ಕೋಟಿ ಹಗರಣವೆಸಗಿ ಸಚಿವಸ್ಥಾನ ಕಳೆದುಕೊಂಡಿದ್ದ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿಸಿದ್ದು ಖಂಡನೀಯ. ನಾಗೇಂದ್ರನ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಆಗಸ್ಟ್ 18ರಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ₹187 ಕೋಟಿ ಹಗರಣ ಮಾಡಿ ರಾಜೀನಾಮೆ ನೀಡಿದ್ದವರನ್ನೇ ಮತ್ತೆ ಮಂತ್ರಿ ಮಾಡಿದ್ದನ್ನು ನೋಡಿದರೆ ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಶಾಮೀಲಾಗಿರುವ ಸಂಶಯ ಮೂಡುತ್ತಿದೆ. ಜಿಲ್ಲೆಯಲ್ಲಿಯೂ ಸಹ ಆಗಸ್ಟ್ 18ರಿಂದ ಡಿಸಿ ಕಚೇರಿ ಎದುರು ನಿತ್ಯ ಒಂದೊಂದು ಕ್ಷೇತ್ರದವರಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿ ಮುಕ್ತಾಯವಾದರೆ 8 ಲಕ್ಷ ಎಕರೆ ನೀರಾವರಿಯಾಗಲಿದೆ. ಕಳೆದ ಮೂರು ವರ್ಷಗಳಿಂದ ಮುಳುಗಡೆ ರೈತರಿಗೆ ಪರಿಹಾರ ಕೊಡದೆ, ಒಪ್ಪಂದ ಮಾಡಿಕೊಂಡು ಒಂದು ಬೆಲೆ ನಿಗದಿ ಮಾಡಿದರು. ಬಿಡದಿಯಲ್ಲಿ ಎಕರೆಗೆ ಮೂರು ಕೋಟಿ ಕೊಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿನ ರೈತರಿಗೆ ಯಾಕೆ ಪ್ರತಿ ಎಕರೆಗೆ ಒಂದು ಕೋಟಿ ಪರಿಹಾರ ಕೊಡಬಾರದು ಎಂದು ಪ್ರಶ್ನಿಸಿದರು.ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಜಿಲ್ಲಾದ್ಯಂತ ಬರಗಾಲ ಇರುವುದರಿಂದ ತುರ್ತಾಗಿ ಬರಗಾಲ ಘೋಷಿಸಿ ಪರಿಹಾರ ಕೊಡುವ ಕೆಲಸ ಪ್ರಾರಂಭಿಸಬೇಕು. ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯ ಸರ್ಕಾರ ವಿಳಂಬನೀತಿ ಅನುಸರಿಸದೆ ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಕಾಂಗ್ರೆಸ್‌ನಲ್ಲಿ ಹಗರಣ ಮಾಡುವ, ಭ್ರಷ್ಟಾಚಾರ ಮಾಡುವ ಸಾಮರ್ಥ್ಯ ಇರುವವರನ್ನು ಮಾತ್ರ ಮಂತ್ರಿ ಮಾಡುತ್ತಾರೆನೋ ಎಂದು ಸಂಶಯ ವ್ಯಕ್ತವಾಗಿದೆ. ದುಡ್ಡಿಗಾಗಿ ಮಂತ್ರಿಗಿರಿ ಎಂಬ ಹೊಸ ಕಾನ್ಸೆಪ್ಟ್ ಕಾಂಗ್ರೆಸ್ ಪಕ್ಷ ಜಾರಿಗೆ ತಂದಂತಿದ್ದು, ನಾನು ಮಂತ್ರಿಯಾಗದಿರಲು ಇವರೇ ಕಾರಣ ಎಂದು ಕಾಂಗ್ರೆಸ್ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಆರೋಪಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಹಣಕ್ಕೆ ಬೆಲೆಯಿದೆ ಎಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ಬರಗಾಲ ಇರುವುದರಿಂದ ರಾಜ್ಯ ಸರ್ಕಾರ ಪ್ರತಿ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡಬೇಕು. ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಕವಟಗಿ, ವಿಜಯ ಜೋಶಿ ಇದ್ದರು.