ಬೆಂಗಳೂರು : ರಾಜ್ಯದ ಎ ವರ್ಗದ ದೇವಾಲಯಗಳ 2,521 ಕೋಟಿ ರು. ನಿಶ್ಚಿತ ಠೇವಣಿ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುವುದು. ಈ ದೇಗುಲಗಳ ಆದಾಯದ ಶೇ.10ರಷ್ಟು ಮಾತ್ರ ಯಾವುದೇ ಆದಾಯ ಇಲ್ಲದ ಸಿ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಉಪಯೋಗಿಸಲಾಗುವುದು ಎಂದು ಮುಜರಾಯಿ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಡಿ ಸುಮಾರು 39,000 ದೇವಸ್ಥಾನಗಳು ಬರಲಿದ್ದು, ಎ ವರ್ಗದ ದೇವಸ್ಥಾನಗಳಿಗೆ ಕಾಣಿಕೆ, ಹುಂಡಿ, ವಿವಿಧ ಸೇವೆಗಳ ರೂಪದಲ್ಲಿ ಶುಲ್ಕ, ಚಿನ್ನ, ಬೆಳ್ಳಿ ಮುಂತಾದ ವಸ್ತುಗಳು ಬರುತ್ತವೆ. ವರ್ಷಕ್ಕೆ ಕೋಟ್ಯಂತರ ರು. ಆದಾಯವಿದೆ ಎಂದರು.

ಎಷ್ಟೋ ದೇವಾಲಯಗಳಲ್ಲಿ ಹುಂಡಿ ಹಣ ದೋಚಿಕೊಂಡು ಹೋಗಿದ್ದಾರೆ. ಕೆಲ ದೇವಾಲಯಗಳಲ್ಲಿ ಶೇಖರಣೆಯಾಗುವ ಹುಂಡಿ ಹಣದ ಬಗ್ಗೆ ನಿಖರ ಮಾಹಿತಿ ನೀಡುತ್ತಿಲ್ಲ. ಇಂಥ ಅಕ್ರಮಗಳಿಗೆ ತಡೆ ಹಾಕಲು ಮುಜರಾಯಿ ಇಲಾಖೆ ಎಲ್ಲ ದೇವಾಲಯಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಿದೆ ಎಂದರು.


ವರ್ಷಕ್ಕೆ 13 ಕೋಟಿ ರು. ಆದಾಯ

ಇತ್ತೀಚೆಗೆ ತಾವು ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ವಿಚಾರಿಸಿದಾಗ ವರ್ಷಕ್ಕೆ 13 ಕೋಟಿ ರು. ಆದಾಯ ಬರುತ್ತದೆ ಎಂದು ಅಧಿಕಾರಿ ಹೇಳಿದರು. ಆದರೆ ಅಲ್ಲಿಗೆ ಬರುವ ಭಕ್ತರನ್ನು ನೋಡಿದರೆ ವರ್ಷಕ್ಕೆ 100 ಕೋಟಿ ರು.ಗಿಂತ ಹೆಚ್ಚು ಹಣ ಬರಬಹುದು ಎಂದು ಅನಿಸಿತು. ಅದೇ ರೀತಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ್ದೇನೆ. ಭಕ್ತರು ನೀಡುವ ಸೀರೆ, ಕಾಣಿಕೆಗಳ ಬಗ್ಗೆ ಅನುಮಾನ ಕಂಡು ಬಂತು. ಹೀಗಾಗಿ ದೇವಸ್ಥಾನಗಳಲ್ಲಿ ಸಿಸಿ ಟಿವಿ ಅಳವಡಿಸಿ ನಿಗಾ ವಹಿಸುವುದು ಸೇರಿ ಹಲವು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮಾಸ್ಟರ್‌ ಪ್ಲ್ಯಾನ್‌ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಲ್ಲದೆ, ಇಡೀ ವ್ಯವಸ್ಥೆಯನ್ನು ಕೇಂದ್ರಿಕೃತ ಮಾಡಲು ಅನುಕೂಲವಾಗುವಂತೆ ಸರ್ವರ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದಾಗಿ ಮುಜರಾಯಿ ಇಲಾಖೆ ಆಯುಕ್ತರು ಕೇಂದ್ರ ಸ್ಥಾನದಲ್ಲೇ ಕುಳಿತು ಎಲ್ಲ ದೇವಾಲಯಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಮತ್ತು ಹಣ ದುರುಪಯೋಗ ಆಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ನಮ್ಮ ತಕರಾರು ಇಲ್ಲ:

ತಿರುಪತಿಯಲ್ಲಿ ಮೊದಲ ಪೂಜೆಯನ್ನು ಮೈಸೂರು ಒಡೆಯರ ವಂಶಸ್ಥರು ಮಾಡುತ್ತಿದ್ದರು. ರಾಜರ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಬಂದ ಮೇಲೆ ಮುಖ್ಯಮಂತ್ರಿಗಳಿಗೆ ಮೊದಲ ಪೂಜೆಯ ಅವಕಾಶವಿರುತ್ತದೆ. ಆದರೆ ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಸಚಿವರು, ಶಾಸಕರಿಗೂ ಈ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಅವಕಾಶ ಇಲ್ಲವೆಂದು ಟಿಟಿಡಿ ಟ್ರಸ್ಟ್‌ ಹೇಳಿದರೆ ಆ ಬಗ್ಗೆ ತಕರಾರು ಮಾಡುವುದಿಲ್ಲ ಎಂದು ಡಾ. ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.