ನವದೆಹಲಿ : 2026ರ ಡಿಸೆಂಬರ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಚುನಾವಣೆ ನಡೆಸಲು ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದ್ದ ಮೇಲ್ಮನವಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ.

ರಾಜ್ಯ ಸರ್ಕಾರ ಹಾಗೂ ಜಿಬಿಎ ಕೋರ್ಟ್‌ಗೆ ಅರ್ಜಿ

ಈ ಹಿಂದೆ ಜಿಬಿಎ ಚುನಾವಣಾ ಪ್ರಕ್ರಿಯೆಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಗಡುವು ನೀಡಿತ್ತು. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ನಡೆಯುತ್ತಿರುವುದರಿಂದ ಆಗಸ್ಟ್ ಒಳಗೆ ಚುನಾವಣೆ ನಡೆಸುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹಾಗೂ ಜಿಬಿಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ರಾಜ್ಯದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹಾಗೂ ಎಜಿ ಶಶಿಕಿರಣ್‌ ಶೆಟ್ಟಿ, ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದ್ದು, ಸಿಬ್ಬಂದಿಯ ಕೊರತೆ ಎದುರಾಗಲಿದೆ. ಅಲ್ಲದೆ, ಕೆಲವು ಮತದಾರರು ಬಿಟ್ಟು ಹೋಗಲಿದ್ದಾರೆ. ಹೀಗಾಗಿ, ಆಗಸ್ಟ್ ಒಳಗೆ ಚುನಾವಣೆ ನಡೆಸುವುದು ಅಸಾಧ್ಯ. ನವೆಂಬರ್‌ಗೆ ಹೊಸ ಮತದಾರರ ಅಂತಿಮ ಪಟ್ಟಿ ಹೊರ ಬರಲಿದೆ. ಡಿಸೆಂಬರ್‌ ಅಂತ್ಯದೊಳಗೆ ಚುನಾವಣೆ ಮುಗಿಸುತ್ತೇವೆ ಎಂದು ಮನವಿ ಮಾಡಿದರು.


ಡಿಸೆಂಬರ್ 31ರೊಳಗೆ ಜಿಬಿಎ ಚುನಾವಣೆ ನಡೆಸಲು ಹೊಸ ಗಡುವು

ಈ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, ಡಿಸೆಂಬರ್ 31ರೊಳಗೆ ಜಿಬಿಎ ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಹೊಸ ಗಡುವು ವಿಧಿಸಿತು. ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ಮುಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದು, ಡಿಸೆಂಬರ್‌ನಲ್ಲಿ ಮತ್ತೆ ಬೇರೆ ಕಾರಣ ತರಬೇಡಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.