ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ, 5 ನಗರ ಪಾಲಿಕೆ ಚುನಾವಣೆಗೆ ಸಿದ್ಧರಾಗುವುದು ಸೇರಿದಂತೆ ನಗರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಗರ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ, 5 ನಗರ ಪಾಲಿಕೆ ಚುನಾವಣೆಗೆ ಸಿದ್ಧರಾಗುವುದು ಸೇರಿದಂತೆ ನಗರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಗರ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆ ನಡೆಸಲಾಯಿತು.ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು, ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಎಸ್ಐಆರ್ ಪೂರ್ವ ಅಥವಾ ಎಸ್‌ಐಆರ್ ನಂತರದ ಮತದಾರರ ಪಟ್ಟಿಯಲ್ಲಿ ಯಾವುದರ ಮೂಲಕ ಚುನಾವಣೆ ಎದುರಿಸಬೇಕು ಎಂಬ ಕುರಿತಂತೆ ಚರ್ಚಿಸಲಾಯಿತು.
ಜಿಬಿಎ ಚುನಾವಣೆ ವಿಚಾರ ಸುಪ್ರೀಂಕೋರ್ಟ್ ಮುಂದಿದ್ದು, ಒಂದು ವೇಳೆ ಸುಪ್ರೀಂಕೋರ್ಟ್ ಚುನಾವಣೆ ನಡೆಸಲೇಬೇಕು ಎಂದು ಆದೇಶಿಸಿದರೆ ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ, ರಾಜ್ಯ ಚುನಾವಣಾ ಆಯೋಗದಿಂದಲೂ 27 ವಾರ್ಡ್‌ಗಳಲ್ಲಿ ಎಸ್ಐಆರ್ ಮಾಡಲಾಗುತ್ತಿದ್ದು, ಅದರ ಫಲಿತಾಂಶವೂ ಬರಬೇಕಿದೆ. ಇದೆಲ್ಲವನ್ನು ಗಮನಿಸಿ ಎಲ್ಲ 5 ನಗರ ಪಾಲಿಕೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಹೆಚ್ಚಾಗಿ ಗೆಲ್ಲಲು ಕಾರ್ಯತಂತ್ರ ರೂಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದರು.ಸಭೆ ಆರಂಭದಲ್ಲಿಯೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ನಗರ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳಲ್ಲಿನ ಪಾದಚಾರಿ ಮಾರ್ಗ ಒತ್ತುವರಿ ತೆರವು ಪ್ರಕ್ರಿಯೆಯ ಈವರೆಗಿನ ಪ್ರಗತಿ, ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಗುಂಡಿ ಮುಚ್ಚಲು ಸರ್ಕಾರ ಅನುಮೋದಿಸಿರುವ 2000 ಕೋಟಿ ರು. ಯಾವ ರೀತಿ ಬಳಕೆ ಮಾಡಲಾಗುವುದು ಎಂಬುದನ್ನು ಶಾಸಕರಿಗೆ ಮಾಹಿತಿ ನೀಡಿದರು. ಜತೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವಿನ ವೇಳೆ ತೆರವು ಮಾಡಲಾದ ಬೀದಿಬದಿ ವ್ಯಾಪಾರಿಗಳಿಗೆ ಯಾವೆಲ್ಲ ರೀತಿಯ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ವಿವರಣೆ ನೀಡಿದರು.
ಸಭೆ ಬಳಿಕ ಮಾತನಾಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮೊದಲ ಸಭೆ ನಡೆಸಿದ್ದಾರೆ. ನಗರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತಂತೆ ಚರ್ಚಿಸಲಾಗಿದೆ. ಜತೆಗೆ ಜಿಬಿಎ ಚುನಾವಣೆ, ಎಸ್‌ಐಆರ್ ಬಗ್ಗೆಯೂ ಸುಧೀರ್ಘ ಚರ್ಚೆ ಮಾಡಲಾಗಿದೆ ಎಂದರು.ತಿಂಗಳಿಗೊಮ್ಮೆ ಸಭೆ:
ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದೊಂದಿಗೆ ಪ್ರತಿ ತಿಂಗಳು ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರೊಂದಿಗೆ ಸಿಎಂ ಅಥವಾ ಬೆಂಗಳೂರು ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಮಾಸಿಕ ಸಭೆಯಲ್ಲಿ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪಾಲನೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮತ್ತು ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಚರ್ಚಿಸಲು ತೀರ್ಮಾನಿಸಲಾಯಿತು.ಸಭೆಗೆ ಹಿರಿಯ ಸಚಿವರು, ಶಾಸಕರ ಗೈರು
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಬೆಂಗಳೂರಿನ ಹಿರಿಯ ಸಚಿವರು, ಶಾಸಕರು ಗೈರಾಗಿದ್ದರು. ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಹಿರಿಯ ಶಾಸಕರಾದ ಜಮೀರ್ ಅಹಮದ್ ಖಾನ್, ಪ್ರಿಯಕೃಷ್ಣ ಸಭೆಗೆ ಬರಲಿಲ್ಲ. ರಾಮಲಿಂಗಾರೆಡ್ಡಿ ಅವರು ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮೊದಲೇ ತಿಳಿಸಿದ್ದರು ಎಂದು ಖುದ್ದು ಮುಖ್ಯಮಂತ್ರಿ ಅವರು ಸಭೆಗೆ ತಿಳಿಸಿದರು. ಉಳಿದ ಶಾಸಕರು ಯಾವ ಕಾರಣಕ್ಕಾಗಿ ಸಭೆಗೆ ಹಾಜರಾಗಲಿಲ್ಲ ಎಂಬುದು ತಿಳಿದುಬಂದಿಲ್ಲ. ಅದರಲ್ಲೂ ಸಚಿವ ಬೈರತಿ ಸುರೇಶ್ ಅವರು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯ ಸಭೆಗೆ ಗೈರಾಗಿ, ಮಂಗಳವಾರ ಸಂಜೆ ಚಂದ್ರಾಲೇಔಟ್‌ನ ಕನಕ ಭವನದಲ್ಲಿ ನಡೆದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಟ್ರಸ್ಟ್‌ನ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಂಡಿದ್ದರು.ಗೊಂದಲ ಆಗದಂತೆ ನೋಡಿಕೊಳ್ಳಿ: ಸಿಎಂ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು, ನಗರದಲ್ಲಿ ಈಗಾಗಲೇ ಪಾದಚಾರಿ ಮಾರ್ಗ ಒತ್ತುವರಿ ತೆರವು ಆರಂಭಿಸಲಾಗಿದೆ. ಅದರ ಜತೆಗೆ ರಾಜಕಾಲುವೆ ಒತ್ತುವರಿ ತೆರವನ್ನು ಅಭಿಯಾನದ ರೂಪದಲ್ಲಿ ನಡೆಸಲಾಗುವುದು. ಈ ವೇಳೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಗೊಂದಲ, ಗದ್ದಲವಾಗದಂತೆ ಶಾಸಕರು ನೋಡಿಕೊಳ್ಳಬೇಕು. ಜತೆಗೆ ಈಗಾಗಲೇ ಸರ್ಕಾರದಿಂದ ನೀಡಲಾಗಿರುವ ಅನುದಾನ ಆಧಾರದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಶೀಘ್ರದಲ್ಲಿ ಕ್ರಿಯಾಯೋಜನೆ ರೂಪಿಸಿ, ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜಿಬಿಎ ಚುನಾವಣೆಗೂ ಮುನ್ನ ಎಲ್ಲ ಕೆಲಸಗಳೂ ಆರಂಭವಾಗಬೇಕು ಎಂದು ಸೂಚಿಸಿದರು.