ಕಾರವಾರ: ಜಿಪಂ, ತಾಪಂ ಹಾಗೂ ಗ್ರಾಪಂ ಸೇರಿದಂತೆ ಮುಂದಿನ ದಿನಗಳಲ್ಲಿ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾದರೂ ಅವುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ, ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಸನ್ನದ್ಧರಾಗಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ಹಾಗೂ ಶಿವಮೊಗ್ಗ ಜಿಲ್ಲಾ ಸಂಘಟನಾ ಪ್ರಭಾರಿ ರೂಪಾಲಿ ಎಸ್. ನಾಯ್ಕ್ ಕರೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಯಶಸ್ವಿಯಾಗಿ ಜರುಗಿದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಪಕ್ಷದ ಬಲವರ್ಧನೆಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಜನಸಾಮಾನ್ಯರ ಕಲ್ಯಾಣಕ್ಕಾಗಿ ಹಗಲಿರುಳು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ಅವರಿಗೆ ತಳಮಟ್ಟದಿಂದ ಇನ್ನಷ್ಟು ಶಕ್ತಿ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಪ್ರತಿಯೊಂದು ವಿಭಾಗದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೊಸ ಹುಮ್ಮಸ್ಸಿನೊಂದಿಗೆ ಪಕ್ಷಕ್ಕಾಗಿ ಶ್ರಮಿಸಬೇಕು. ಚುನಾವಣಾ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಪಕ್ಷದ ಹೈಕಮಾಂಡ್ ಘೋಷಿಸುವ ಅಭ್ಯರ್ಥಿ ಯಾರೇ ಆದರೂ ಅವರನ್ನು ಅತ್ಯಂತ ನಿಷ್ಠೆಯಿಂದ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿಸಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಜಿಲ್ಲೆಯಲ್ಲಿ ಅತ್ಯಂತ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ಯಾವುದೇ ಒಬ್ಬ ಅರ್ಹ ನಾಗರಿಕ ಅಥವಾ ಯುವ ಮತದಾರ ತಾಂತ್ರಿಕ ಕಾರಣಗಳಿಂದ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಚ್ಚರ ವಹಿಸುವುದು ನಮ್ಮ ಸಂಘಟನೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕಾರ್ಯಕರ್ತರಿಗೆ ನೆನಪಿಸಿದರು.
ಶಿವಮೊಗ್ಗ ಜಿಲ್ಲೆಯ ಸಂಘಟನಾ ಪ್ರಭಾರಿಯಾಗಿ ನೇಮಕಗೊಂಡ ತರುವಾಯ ಪ್ರಥಮ ಬಾರಿಗೆ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ರೂಪಾಲಿ ಎಸ್. ನಾಯ್ಕ್ ಅವರನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿಯ ವತಿಯಿಂದ ಸನ್ಮಾನಿಸಲಾಯಿತು.ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಪಕ್ಷದ ಪ್ರಭಾರಿಗಳಾದ ಸಿದ್ದರಾಮಣ್ಣ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಇದ್ದರು.
