ರಾಘು ಕಾಕರಮಠ
ಅಂಕೋಲಾ: ಗ್ರಾಮ ಪಂಚಾಯಿತಿಗಳು ತೀವ್ರ ಆರ್ಥಿಕ ಹಾಗೂ ಆಡಳಿತಾತ್ಮಕ ಸಂಕಷ್ಟ ಎದುರಿಸುತ್ತಿದ್ದು, ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದರೆ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು "ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಂಘ " ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.2025–26 ಹಾಗೂ 2026–27ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ ಇನ್ನೂ ಬಿಡುಗಡೆ ಆಗದಿರುವುದು ಗ್ರಾಪಂಗಳ ಕಾರ್ಯನಿರ್ವಹಣೆಗೆ ಭಾರೀ ಹೊಡೆತ ನೀಡಿದೆ. ಈ ಅನುದಾನವೇ ಪಂಚಾಯಿತಿಗಳ ಪ್ರಮುಖ ಆರ್ಥಿಕ ಮೂಲವಾಗಿದ್ದು, ಕುಡಿಯುವ ನೀರು, ಬೀದಿ ದೀಪ, ರಸ್ತೆ ದುರಸ್ತಿ, ಸ್ವಚ್ಛತೆ ಹಾಗೂ ಇತರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಪರಿಣಾಮ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸಲು ಪಂಚಾಯಿತಿಗಳು ಪರದಾಡುವಂತಾಗಿದೆ.
ಇದರ ಜತೆಗೆ ಕಳೆದ ಒಂದು ವರ್ಷದಿಂದ ಇ-ಸ್ವತ್ತು ತಂತ್ರಾಂಶದಲ್ಲಿ ಉಂಟಾಗಿರುವ ನಿರಂತರ ತಾಂತ್ರಿಕ ದೋಷಗಳಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಸಮಸ್ಯೆ ತಂತ್ರಾಂಶದಲ್ಲಿದ್ದರೂ ಜನರ ಅಸಮಾಧಾನ ಸಿಬ್ಬಂದಿಯ ಮೇಲೆಯೇ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಉಲ್ಬಣಗೊಂಡಿದ್ದು, ಲಭ್ಯವಿರುವ ಸಿಬ್ಬಂದಿಯೇ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಎಲ್ಲ ಸಮಸ್ಯೆಗಳ ಕುರಿತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಿರೀಶ ಎನ್. ನಾಯಕ ಅವರು ಸಂಘದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದು, ಇದು ರಾಜ್ಯಮಟ್ಟದ ಸಮಸ್ಯೆಯಾಗಿರುವುದರಿಂದ ಸರ್ಕಾರ ತುರ್ತು ಕ್ರಮ ಕೈಗೊಂಡು ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಘವು ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ತಾಂತ್ರಿಕ ಬೆಂಬಲ ಒದಗಿಸುವುದು, ಇ-ಸ್ವತ್ತು ಸೇರಿದಂತೆ ಸಾರ್ವಜನಿಕ ಸೇವಾ ತಂತ್ರಾಂಶಗಳ ದೋಷ ನಿವಾರಣೆಗೆ ಜಿಲ್ಲಾ ಮಟ್ಟದ ತಾಂತ್ರಿಕ ತಂಡ ರಚಿಸುವುದು, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು, ತಾತ್ಕಾಲಿಕ ಸಿಬ್ಬಂದಿ ನಿಯೋಜನೆ ಮೂಲಕ ಕೆಲಸದ ಒತ್ತಡ ಕಡಿಮೆ ಮಾಡುವುದು ಹಾಗೂ ಹಣಕಾಸು ಅನುದಾನಗಳನ್ನು ಕಾಲಮಿತಿಯೊಳಗೆ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದೆ.
ಪ್ರತಿಭಟನೆ ನಡೆಸುವ ಚಿಂತನೆ: ಸರ್ಕಾರ ಅಗತ್ಯ ಸಹಕಾರ ಮತ್ತು ಸಂಪನ್ಮೂಲಗಳನ್ನು ಒದಗಿಸಿದಾಗ ಮಾತ್ರ ಗ್ರಾಮ ಪಂಚಾಯಿತಿಗಳು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ ರಾಜ್ಯಮಟ್ಟದಲ್ಲಿ ಪಂಚಾಯಿತಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಿರೀಶ ಎನ್. ನಾಯಕ ಹೇಳಿದರು.