ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ತಕ್ಷಣ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಕಾರ್ಯ ಕೈಗೊಂಡು ರೈತರ ಜೀವ ಹಾಗೂ ಜೀವನೋಪಾಯ ರಕ್ಷಿಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ತೀವ್ರ ಹಿನ್ನಡೆ ಅನುಭವಿಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರೂ ಸಹ ಮುಂಗಾರು ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲೇ ಬಿತ್ತನೆ ಮಾಡದೇ ಉಳಿದಿದ್ದು, ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಗ್ರಾಮವಾರು ಹಾಗೂ ಬೆಳೆವಾರು ಸಮೀಕ್ಷೆ ನಡೆಸಿ ಬೆಳೆನಷ್ಟ ಅಂದಾಜಿಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಕಡೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ ಕೈಗೊಂಡಿರುವ ಪ್ರಯತ್ನ ಮಾದರಿಯಾಗಿ ಪಡೆದು ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡಲೇ ಮೋಡ ಬಿತ್ತನೆ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು ಸ್ಥಳೀಯ ಕೈಗಾರಿಕೆಗಳೊಂದಿಗೆ ತುರ್ತು ಸಭೆ ನಡೆಸಿ ಸಿಎಸ್‌ಆರ್ ನಿಧಿ ಹಾಗೂ ಇತರ ಮೂಲಗಳಿಂದ ಹಣ ಸಂಗ್ರಹಿಸಿ ಕ್ಲೌಡ್ ಸೀಡಿಂಗ್ ಕಾರ್ಯಕ್ಕೆ ಚಾಲನೆ ನೀಡಬೇಕು. ಅಲ್ಲದೆ, ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರಿಗೆ ಬೆಳೆನಷ್ಟ ಪರಿಹಾರ, ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಮನ್ನಾ ಹಾಗೂ ಹೊಸ ಬೆಳೆ ಸಾಲದ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.


ಬಿಜೆಪಿ ತಂಡವು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬಿತ್ತನೆಯಾಗದ ಜಮೀನು ಹಾಗೂ ಒಣಗಿರುವ ಬೆಳೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಬಸವರಾಜ ಕ್ಯಾವಟರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾ ಎಸ್‌ಐಆರ್ ಸಂಚಾಲಕ ರಾಜು ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸ್ರೂರು ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ರೈತರ ಬಗ್ಗೆ ಕಾಳಜಿ ಏಕಿಲ್ಲ?: ಬಸವರಾಜ ಕ್ಯಾವಟರ್

ಅಧಿಕಾರದ ರಾಜಕೀಯದಲ್ಲಿ ತೊಡಗಿರುವ ಜನಪ್ರತಿನಿಧಿಗಳು ರೈತರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ ಎಂದು ಬಸವರಾಜ ಕ್ಯಾವಟರ್ ಟೀಕಿಸಿದರು.

ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅಧಿಕಾರಕ್ಕಾಗಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತಾರೆ. ಆದರೆ, ರೈತರ ಉಳಿವಿಗಾಗಿ ಅದೇ ರೀತಿಯ ಬದ್ಧತೆ ತೋರಿಸುತ್ತಿಲ್ಲ ಎಂದು ಆರೋಪಿಸಿದರು. ಖಾಸಗಿ ಕಂಪನಿಗಳ ಸಹಕಾರದಿಂದ ವಿವಿಧ ಕಾರ್ಯಕ್ರಮ ಆಯೋಜಿಸುವ ಉತ್ಸಾಹ, ಮೋಡ ಬಿತ್ತನೆ ಮೂಲಕ ರೈತರನ್ನು ಉಳಿಸುವ ಕಾರ್ಯದಲ್ಲಿಯೂ ಕಾಣಿಸಬೇಕು ಎಂದು ಆಗ್ರಹಿಸಿದರು.