ಅಂಕೋಲಾ: ಹುಲಿ ಗಣತಿ ಕಾರ್ಯಕ್ಕಾಗಿ ಅರಣ್ಯದಲ್ಲಿ ಅಳವಡಿಸಲಾಗಿದ್ದ ಎರಡು ಕ್ಯಾಮೆರಾಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸಿ, ಕಳುವಾದ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿಲ್ಲೂರು ಗ್ರಾಮದ ಕೊಳಗಿಯ ದುರ್ಗಾ ದೇವು ಹರಿಕಂತ್ರ (53) ಬಂಧಿತ ಆರೋಪಿ.ಈತನಿಂದ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಸುಮಾರು ₹50 ಸಾವಿರ ಮೌಲ್ಯದ ಎರಡು ಕ್ಯಾಮೆರಾಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ, ಅಪರಾಧ ಪತ್ತೆ ದಳದ ಸಿಬ್ಬಂದಿ ಮಾದೇವ ಸಿದ್ದಿ, ಪ್ರಶಾಂತ ನಾಯ್ಕ, ಭಗವಾನ್ ಗಾಂವಕರ, ಆಸೀಫ್ ಕುಂಕುರ, ಗಿರೀಶ ಲಮಾಣಿ ಕಾರ್ಯಾಚರಣೆಯಲ್ಲಿ ಇದ್ದರು.
ಮೇ 1ರಿಂದ 25ರ ವರೆಗೆ ನಡೆದ ಅಖಿಲ ಭಾರತ ಹುಲಿ ಗಣತಿ (ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್) ಕಾರ್ಯಾಚರಣೆಯ ಅಂಗವಾಗಿ ಹೊಸಕಂಬಿ ವಲಯದ ಮಾಣಿಕಾರ–ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ ''ಕಡಿಬ್ಯಾಕ್'' ಕಂಪನಿಯ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅರಣ್ಯ ಸಿಬ್ಬಂದಿ ಪ್ರತಿ ಐದು ದಿನಗಳಿಗೊಮ್ಮೆ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿ ದಾಖಲಾಗಿದ್ದ ಮಾಹಿತಿಯನ್ನು ರೇಂಜ್ ಅರಣ್ಯ ಕಚೇರಿಯ ಕಂಪ್ಯೂಟರ್‌ಗೆ ವರ್ಗಾಯಿಸುತ್ತಿದ್ದರು. ಮೇ 11ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾ ಅಲ್ಲಿಯೇ ಇತ್ತು. ಆದರೆ, ಮೇ 13ರಂದು ಕರ್ತವ್ಯಕ್ಕೆ ಹೋದಾಗ ಕ್ಯಾಮೆರಾ ನಾಪತ್ತೆಯಾಗಿತ್ತು. ಕ್ಯಾಮೆರಾ ಕಾಣೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ದೂರು ನೀಡಿದ್ದರು. ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.