ಬ್ಯಾಡಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಒಂದಿಲ್ಲೊಂದು ಸೌಲಭ್ಯಗಳು ತಲುಪಬೇಕೆನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ, ಹೀಗಾಗಿ ಬಡವರಿಗೆ ಜನಪರ ಯೋಜನೆ ಕಾಂಗ್ರೆಸ್ ಪ್ರಕಟಿಸುತ್ತಾ ಬಂದಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಅಣಜಿ ಗ್ರಾಮದಲ್ಲಿ ₹ 30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರಮಿಕ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ದೇಶದ ಜನರ ನಾಡಿಮಿಡಿತ ಸರ್ಕಾರ ಅರ್ಥೈಸಿಕೊಂಡಿದೆ, ಸರ್ಕಾರ ನಡೆಸಲು ಕಷ್ಟ ಸಾಧ್ಯ ಎನಿಸಿದರಾದರೂ ಸಹ ಜನಪರ ಹಾಗೂ ಬಡ ಜನರ ಪರವಾದ ಯೋಜನೆಗಳಿಗೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ವಸತಿ ಶಾಲೆ ಉದ್ದೇಶ ಈಡೇರಲಿ: ಬಹುತೇಕ ಬಡ ಹಾಗೂ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಬೇರೊಂದು ಊರಿಗೆ ವಲಸೆ ಮಾಡಲಿದ್ದಾರೆ, ಇಂತಹ ಕುಟುಂಬಗಳ ಹಿನ್ನೆಲೆಯಿಂದ ಬಂದಂತಹ ಮಕ್ಕಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗದಿರಲಿ ಎನ್ನುವ ಉದ್ದೇಶದಿಂದ ವಸತಿ ನಿಲಯಗಳನ್ನು ಆರಂಭಿಸಲಾಗಿದೆ ಎಂದರು.

ಸುಸಜ್ಜಿತ ಕಟ್ಟಡವಾಗಲಿ: ಬಹುದೊಡ್ಡ ಮೊತ್ತದ ಕಟ್ಟಡ ನಿರ್ಮಾಣವಾಗುತ್ತಿದೆ ಹೀಗಾಗಿ ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂದಾಗಬೇಕು ಯಾರಿಂದಲೂ ತಕರಾರು ಬರದಂತೆ ಕಟ್ಟಡ ನಿರ್ಮಾಣ ಮಾಡುವ ಮೂಲಕ ರಾಜ್ಯದಲ್ಲೇ ಗುರ್ತಿಸಿಕೊಳ್ಳುವಂತಹ ಕಟ್ಟಡ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ರೈತ ಕಾರ್ಮಿಕ ಮಕ್ಕಳಿಗೂ ಅವಕಾಶಕ್ಕೆ ಒತ್ತಡ: ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಜಿಲ್ಲೆಗೊಂದು ಕಾರ್ಮಿಕರ ವಸತಿ ಶಾಲೆಗೆ ಮಾಜಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಜೂರಾತಿ ನೀಡಿದ್ದರು, ಹಿರೇಅಣಜಿ ಗ್ರಾಮದ 8.5 ಎಕರೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸುತ್ತಿರುವ ವಸತಿ ಶಾಲೆಯಲ್ಲಿ ಬಾಲಕರು, ಬಾಲಕಿಯರು ಸೇರಿದಂತೆ 350 ವಿದ್ಯಾರ್ಥಿಗಳಿಗೆ 6 ರಿಂದ 12ನೇ ತರಗತಿಯವರೆಗೂ ಸಿಬಿಎಸ್‌ಸಿ ಶಿಕ್ಷಣ ಸಿಗಲಿದೆ, ಕಾರ್ಮಿಕರ ಮಕ್ಕಳ ಜೊತೆ ರೈತ ಕಾರ್ಮಿಕರ ಮಕ್ಕಳಿಗೆ ಇಂತಹ ಶಾಲೆಗಳಲ್ಲಿ ಅವಕಾಶ ನೀಡಲು ತಿದ್ದುಪಡಿ ಮಾಡಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಎಂದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಮಾಜಿ ಅಧ್ಯಕ್ಷ ಸುರೇಶಗೌಡ್ರ ಪಾಟೀಲ (ದಿಡಗೂರು), ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ತಾಪಂ.ಮಾಜಿ ಸದಸ್ಯ ಪ್ರಭುಗೌಡ ಪಾಟೀಲ, ಮುಖಂಡರಾದ ಕರಬಸಪ್ಪ ವಾರದ, ಕುಮ್ಮೂರ ನಾಗನಗೌಡ್ರ, ಸುಭಾಸಪ್ಪ ಮಣ್ಣಮ್ಮನವರ, ಮಂಜನಗೌಡ ಲಿಂಗನಗೌಡ್ರ, ವೀರನಗೌಡ ಪೋಲಿಸ್ ಪಾಟೀಲ, ಮಾರುತಿ ಅಚ್ಚಿಗೇರಿ, ಲಿಂಗರಾಜ ಕುಮ್ಮೂರ, ಎಸ್.ಎಸ್.ಅಂಬಲಿ ಹಾಗೂ ಇನ್ನಿತರರಿದ್ದರು.