ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ೨೦೨೪–೨೫ ಹಾಗೂ ೨೦೨೫–೨೬ನೇ ಶೈಕ್ಷಣಿಕ ವರ್ಷಗಳ ೧೦ ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಪ್ರತಿಭಟನಾ ನಿರತರು ಮಾತನಾಡಿ, ವಿಶ್ವವಿದ್ಯಾಲಯದ ನಿಯಮ ಹಾಗೂ ವಿಭಾಗಗಳ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಬೋಧನೆ ನೀಡುವುದರ ಜೊತೆಗೆ ಪರೀಕ್ಷೆಗಳು ಸುಗಮವಾಗಿ ನಡೆಯಲು ಸಂಪೂರ್ಣ ಸಹಕಾರ ನೀಡಿದ್ದೇವೆ. ಆದರೆ, ೧೦ ತಿಂಗಳಿನಿಂದ ವೇತನ ಪಾವತಿಯಾಗದೇ ಕುಟುಂಬ ನಿರ್ವಹಣೆಯೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಹಲವು ಬಾರಿ ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಂಡಿಕೇಟ್ ಸದಸ್ಯರು ವೇತನ ಬಿಡುಗಡೆಗೆ ಸೂಚನೆ ನೀಡಿದ್ದರೂ ಆಡಳಿತದಿಂದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರು ಸಮಸ್ಯೆ ಪರಿಹಾರಕ್ಕಾಗಿ ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಬಾಕಿ ವೇತನ ಬಿಡುಗಡೆ ಕುರಿತು ಸ್ಪಷ್ಟ ಆದೇಶ ಹೊರಬರುವವರೆಗೆ ಅಹೋರಾತ್ರಿ ಧರಣಿಯನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ.ನೌಕರರ ಸಂಘದ ಅಧ್ಯಕ್ಷರಾದ ಡಾ. ವೆಂಕನಗೌಡ ಪಾಟೀಲ ಅವರು ಧರಣಿ ನಿರತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ ಬೆಂಬಲ ಸೂಚಿಸಿದರು.
ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರು ವಿಶ್ವವಿದ್ಯಾಲಯದಲ್ಲೇ ಉಪಸ್ಥಿತರಿದ್ದು, ಆಡಳಿತ ನಡೆಸುವ ಬದಲು ಬೇರೆ ಸ್ಥಳದಿಂದಲೇ ಆಡಳಿತ ನಿರ್ವಹಿಸುತ್ತಿರುವುದು ಸರಿಯಲ್ಲ ಎಂದು ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಆಡಳಿತ ವೈಖರಿಯಿಂದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿ, ವಿಶ್ವವಿದ್ಯಾಲಯದಲ್ಲೇ ಹಾಜರಿದ್ದು ಜವಾಬ್ದಾರಿಯುತವಾಗಿ ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.
ಎರಡು ದಿನಗಳ ಗಡುವಿನೊಳಗೆ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾನಿರತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಉತ್ತಮ ಕೆ.ಎಚ್., ಡಾ. ನದಾಫ ಎಚ್., ಡಾ. ಶಂಕರ ಕುಂದಗೋಳ, ಡಾ. ರಾಜಶೇಖರ ಡೊಂಬರಮತ್ತೂರು, ಅಭಿನಯ ಎಚ್., ಡಾ.ಅಭಿಲಾಶ ಎಚ್.ಕೆ., ಡಾ. ರಜೀಯಾ ಬೇಗಂ ನದಾಫ, ಡಾ.ಪ್ರವೀಣ ಕರೆಪ್ಪನವರ, ಸೈಯದಾ ಖಾದ್ರಿ, ಶಿವಾನಂದ ದೊಡ್ಡಮನಿ ಉಪಸ್ಥಿತರಿದ್ದರು.