ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕಮೀಷನರೇಟ್‌ ವಿಭಜನೆಗೆ ತಯಾರಿ ನಡೆಸಿರುವ ಸರ್ಕಾರ, ಈಗ ನೆರೆಯ ಜಿಲ್ಲೆಗಳಲ್ಲಿರುವ 15ಕ್ಕೂ ಹೆಚ್ಚಿನ ಪೊಲೀಸ್ ಠಾಣೆಗಳನ್ನು ನಗರ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ನೂತನ ಕಮೀಷನರೇಟ್‌ಗಳ ರಚನೆಗೆ ಮುಂದಾಗಿದೆ.

ಬೆಂಗಳೂರು ಕಮೀಷನರೇಟ್‌ ವಿಭಜಿಸಿ 2 ಅಥವಾ 3 ಕಮೀಷನರೇಟ್‌ಗಳನ್ನಾಗಿ ರಚಿಸಲು ಸರ್ಕಾರ ಯೋಜಿಸಿದೆ. ಇದಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಜಿಲ್ಲೆಗಳ ಕೆಲ ಠಾಣೆಗಳನ್ನು ಕೂಡ ಹೊಸದಾಗಿ ಸೃಜನೆಯಾಗಲಿರುವ ಕಮೀಷನರೇಟ್‌ ವ್ಯಾಪ್ತಿಗೆ ಸೇರಿಸುವ ಬಗ್ಗೆ ಸರ್ಕಾರ ಮುಂದಾಗಿದೆ.

ಬೆಂಗಳೂರು ಶರವೇಗದಲ್ಲಿ ಪ್ರಗತಿ ಕಾಣುತ್ತಿದ್ದು, ಅದಕ್ಕೆ ಪೂರಕವಾಗಿ ಪೊಲೀಸ್ ಆಡಳಿತ ವ್ಯವಸ್ಥೆ ಸಹ ಬದಲಾವಣೆಗೆ ಸರ್ಕಾರ ನಿರ್ಧರಿಸಿದ್ದು, ನಗರ, ಗ್ರಾಮೀಣ ಹಾಗೂ ಅರೆ ಗ್ರಾಮೀಣ ಎಂಬ ಠಾಣೆಗಳನ್ನು ವಿಂಗಡಿಸಿ ಅವುಗಳಲ್ಲಿ ನಗರ ಹಾಗೂ ಅರೆ ಗ್ರಾಮೀಣ ಠಾಣೆಗಳನ್ನು ಕಮೀಷನರೇಟ್‌ಗೆ ಸೇರಿಸಲು ಗೃಹ ಇಲಾಖೆ ಯೋಜಿಸಿದೆ ಎನ್ನಲಾಗಿದೆ.

ಕಮೀಷನರೇಟ್‌ ರಚನೆ ರಚನೆ?


ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 116 ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಸೇರಿದಂತೆ 53 ಸಂಚಾರ, 8 ಮಹಿಳಾ ಹಾಗೂ 9 ಸೈಬರ್ ಸೇರಿದಂತೆ ಒಟ್ಟು 187 ಠಾಣೆಗಳಿವೆ. ಅಲ್ಲದೆ 11 ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗಗಳು ಹಾಗೂ 4 ಸಂಚಾರ ವಿಭಾಗಗಳಿವೆ. ಈ ಠಾಣೆಗಳ ಜತೆ ಹೊಸದಾಗಿ ಹೊರ ಜಿಲ್ಲೆಗಳ 19 ಠಾಣೆಗಳು ಸೇರಿಸಲು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ. 3 ಕಮೀಷನರೇಟ್‌ಗಳಿಗೆ ಒಟ್ಟು 206 ಪೊಲೀಸ್ ಠಾಣೆಗಳಾಗುತ್ತವೆ. ಇದರಲ್ಲಿ 110 ಠಾಣೆಗಳನ್ನು ಬೆಂಗಳೂರು ನಗರ ಕಮೀಷನರೇಟ್‌ಗೆ ಇನ್ನುಳಿದ ಠಾಣೆಗಳನ್ನು ಎರಡು ಕಮೀಷನರೇಟ್‌ಗಳಿಗೆ ವಿಂಗಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಮೀಷನರೇಟ್‌ಗೆ ವ್ಯಾಪ್ತಿ ಬರುವ ಠಾಣೆಗಳು?

ಬೆಂಗಳೂರು ಗ್ರಾಮಾಂತರ ಜಿಲ್ಲೆ: ನೆಲಮಂಗಲ, ದೊಡ್ಡಬಳ್ಳಾಪುರ ನಗರ, ನೆಲಮಂಗಲ ಟ್ರಾಫಿಕ್ ವಿಶ್ವನಾಥಪುರ, ಚನ್ನರಾಯನಪಟ್ಟಣ, ವಿಜಯಪುರ, ಹೊಸಕೋಟೆ, ನಂದಗುಡಿ, ತಿರುಮಶೆಟ್ಟಿಹಳ್ಳಿ, ಆನುಗೊಂಡನಹಳ್ಳಿ ಆನೇಕಲ್‌, ಸೂರ್ಯನಗರ, ಅತ್ತಿಬೆಲೆ, ಬನ್ನೇರುಘಟ್ಟ, ಸರ್ಜಾಪುರ, ಜಿಗಣಿ.ಬೆಂಗಳೂರು ದಕ್ಷಿಣ ಜಿಲ್ಲೆ: ಬಿಡದಿ, ತಾವರೆಕೆರೆ, ಕಗ್ಗಲಿಪುರ.

ವಿಶೇಷ ಆಯುಕ್ತರ ಹುದ್ದೆ ಕೈ ಬಿಟ್ಟ ಸರ್ಕಾರ?

ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತರ ನೇಮಿಸುವ ಪ್ರಸ್ತಾಪಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಕೆಂಪು ನಿಶಾನೆ ತೋರಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ಆಯುಕ್ತರ ನೇಮಕ ವಿಚಾರದಲ್ಲಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹುದ್ದೆಯಿಂದ ಆಡಳಿತಾತ್ಮಕವಾಗಿ ಎರಡು ಪವರ್ ಸೆಂಟರ್ ಸೃಷ್ಟಿಯಾಗುತ್ತವೆ. ಆಗ ಸಂಘರ್ಷಕ್ಕೂ ಕಾರಣವಾಗಿ ಇಡೀ ವ್ಯವಸ್ಥೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮುಖ್ಯಮಂತ್ರಿ ಅವರಿಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಸಂಚಾರ ವಿಭಾಗಕ್ಕೆ ಡಿಜಿಪಿ ಅಥವಾ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿ ಸ್ವತಂತ್ರ ನಿರ್ವಹಣೆ ನೀಡಬಹುದು ಎಂದ ಮಾತುಗಳು ಕೇಳಿ ಬಂದಿದ್ದವು.

ಸಿಸಿಬಿ ಹೇಗೆ?

3 ಕಮೀಷನರೇಟ್‌ಗಳು ರಚನೆಯಾದರೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ವು ಯಾರ ವ್ಯಾಪ್ತಿಗೆ ಬರಲಿದೆ ಎಂಬ ಪ್ರಶ್ನೆ ಎದುರಾಗಿದೆ. ಸಿಸಿಬಿ ಸ್ವತಂತ್ರ ನಿರ್ವಹಣೆಗೆ ಸರ್ಕಾರ ಅವಕಾಶ ನೀಡಲಿದೆ ಎಂದಿದ್ದಾರೆ. ಆದರೆ ಇದಕ್ಕೆ ಹಿರಿಯ ಅಧಿಕಾರಿಗಳ ಕಡು ವಿರೋಧವಿದೆ. ಸಿಸಿಬಿ ಮೇಲೆ ಅಧಿಕಾರ ಇಲ್ಲದೆ ಹೋದರೆ ಆಯುಕ್ತರಿಗೆ ಕಿಮ್ಮತ್ತಿರುವುದಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ. ಹೀಗಾಗಿ ಸಿಸಿಬಿ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿಲ್ಲ ಎಂದು ತಿಳಿದು ಬಂದಿದೆ.