ಮನೆಗಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿದಂತೆ ಸುಮಾರು 70 ಪ್ರಕರಣಗಳಲ್ಲಿ 94 ಆರೋಪಿಗಳನ್ನು ಪತ್ತೆ ಹಚ್ಚಿ 4.91 ಕೋಟಿ ರು.ಮೌಲ್ಯದ ವಸ್ತುಗಳನ್ನು ಉತ್ತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ಮನೆಗಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿದಂತೆ ಸುಮಾರು 70 ಪ್ರಕರಣಗಳಲ್ಲಿ 94 ಆರೋಪಿಗಳನ್ನು ಪತ್ತೆ ಹಚ್ಚಿ 4.91 ಕೋಟಿ ರು.ಮೌಲ್ಯದ ವಸ್ತುಗಳನ್ನು ಉತ್ತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಎಚ್‌ಎಂಟಿ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕರಣಗಳ ಪತ್ತೆ ಕುರಿತು ನಗರದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

13 ಠಾಣೆಗಳ ಪೊಲೀಸರು ಕಾರ್ಯಾಚರಣೆ

ಉತ್ತರ ವಿಭಾಗದ ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮೀ ಲೇಔಟ್‌, ನಂದಿನಿ ಲೇಔಟ್‌, ಯಶವಂತಪುರ, ಆರ್‌ಎಂಸಿ ಯಾರ್ಡ್, ಜಾಲಹಳ್ಳಿ, ಜೆ.ಸಿ.ನಗರ, ಆರ್‌.ಟಿ.ನಗರ, ಸಂಜಯನಗರ ಹಾಗೂ ಹೆಬ್ಬಾಳ ಸೇರಿ 13 ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 2.462 ಕೆಜಿ ಚಿನ್ನಾಭರಣ, 11 ಗ್ರಾಂ ವಜ್ರ, 64 ಬೈಕ್‌ಗಳು, 4 ತ್ರಿಚಕ್ರ ವಾಹನಗಳು, 34.34 ಲಕ್ಷ ರು ನಗದು, 71 ವಿವಿಧ ಕಂಪನಿಯ ಮೊಬೈಲ್‌ಗಳು, 1 ಲ್ಯಾಪ್‌ಟಾಪ್‌, 11 ಸೀರೆಗಳು ಹಾಗೂ 44.780 ಕೆಜಿ ಶ್ರೀಗಂಧ ಮರದ ತುಂಡುಗಳು ಸೇರಿದಂತೆ 4.91 ಕೋಟಿ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಜಪ್ತಿಯಾದ ವಸ್ತುಗಳನ್ನು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸ್ತಾಂತರಿಸಿದರು

ಇದೇ ವೇಳೆ ಕಳ್ಳತನ ಕೃತ್ಯಗಳ ಸಂತ್ರಸ್ತರಿಗೆ ಜಪ್ತಿಯಾದ ವಸ್ತುಗಳನ್ನು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸ್ತಾಂತರಿಸಿದರು. ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ಬಿ.ನೇಮಗೌಡ ಹಾಜರಿದ್ದರು.