ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪಾರ್ಟ್‌ಮೆಂಟ್ ನಿರ್ವಹಣೆ ಶುಲ್ಕ ಸಂಗ್ರಹ, ವ್ಯಯಿಸುವುದು ಹಾಗೂ ನಿವಾಸಿಗಳು ಬಳಸುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ಉಂಟಾಗುತ್ತಿದ್ದ ಗೊಂದಲ ಮತ್ತು ಗಲಾಟೆಗಳಿಗೆ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ಸ್ಪಷ್ಟತೆ ನೀಡಿದೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಹೇಳಿದೆ.ಒಂದು ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ 2 ಬಿಎಚ್‌ಕೆ, 3 ಮತ್ತು 4 ಬಿಎಚ್‌ಕೆ ಸೇರಿದಂತೆ ಭಿನ್ನ ಗಾತ್ರದ ಫ್ಲ್ಯಾಟ್‌ಗಳು ಇದ್ದಾಗ ಎಲ್ಲರೂ ನಿಶ್ಚಿತ ನಿರ್ವಹಣಾ ಶುಲ್ಕವನ್ನು ಕಟ್ಟಬೇಕು ಎನ್ನುವ ಬದಲು, ಫ್ಲ್ಯಾಟ್‌ಗಳ ಚದರಡಿ ಆಧಾರದ ಮೇಲೆ ನಿರ್ವಹಣಾ ಶುಲ್ಕ ನಿಗದಿಪಡಿಸುವ ಸ್ಪಷ್ಟನೆ ನೀಡಲಾಗಿದೆ. ಹೀಗಾಗಿ, ಸಣ್ಣ ಫ್ಲ್ಯಾಟ್‌ ಇರುವವರಿಗೆ ಕಡಿಮೆ ನಿರ್ವಹಣಾ ವೆಚ್ಚ ಕಟ್ಟುವ ಅವಕಾಶ ಸಿಗಲಿದೆ.

ಇನ್ನು ಜಿಮ್, ಸ್ವಿಮ್ಮಿಂಗ್ ಪೂಲ್‌ನಂತಹ ಕೆಲವು ಸೌಲಭ್ಯಗಳನ್ನು ಬಳಸುವವರು ಮಾತ್ರ ಬಳಕೆದಾರರ ಶುಲ್ಕ ಕಟ್ಟುವಂತಹ ಬೈಲಾ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಅಪಾರ್ಟ್‌ಮೆಂಟ್‌ನಲ್ಲಿ ಮಾಡುವ ಕ್ರೀಡಾಕೂಟ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಚಂದಾ ಹಣವನ್ನು ಸಂಗ್ರಹಿಸಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದು ನಿರ್ವಹಿಸಬಹುದು.

ಎಲ್ಲಾ ಧರ್ಮೀಯರು ಅಪಾರ್ಟ್‌ಮೆಂಟ್‌ಗಳಲ್ಲಿ ನೆಲೆಸಿರುತ್ತಾರೆ. ಅಲ್ಲಿ ಮಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ವಹಣಾ ಶುಲ್ಕವನ್ನು ವಿನಿಯೋಗಿಸುವ ಬದಲು ಪ್ರತ್ಯೇಕ ಬ್ಯಾಂಕ್ ಖಾತೆ ತೆಗೆದು ಆಸಕ್ತರು ಮಾತ್ರ ಹಣ ಕಟ್ಟಿ ಆಚರಿಸಬಹುದಾಗಿದೆ.ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಜನರೇಟರ್ ಸೆಟ್‌, ಲಿಫ್ಟ್ ಬದಲಾವಣೆ ಸೇರಿದಂತೆ ದೊಡ್ಡ ನಿರ್ವಹಣಾ ಕೆಲಸಗಳು ಬಂದಾಗ ನಿವಾಸಿಗಳಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸುವ ಬದಲು ಮಾಸಿಕ ಸಣ್ಣ ಮೊತ್ತದ ‘ಬಂಡವಾಳ ನಿಧಿ’ ಸಂಗ್ರಹಿಸಲು, ಅದಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲು ಅವಕಾಶವಿದೆ.

ಸ್ವಿಮ್ಮಿಂಗ್ ಪೂಲ್‌ನ ಉತ್ತಮ ನಿರ್ವಹಣೆಗೆ ಲಕ್ಷಾಂತರ ರು. ಖರ್ಚಾಗುತ್ತದೆ. ಹಾಲಿ ವ್ಯವಸ್ಥೆಯಲ್ಲಿ ನಿರ್ವಹಣಾ ಶುಲ್ಕದಲ್ಲೇ ಪೂಲ್ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಅದನ್ನು ಬಳಸದೇ ಇರುವವರು ಅನೇಕರು ಇರುತ್ತಾರೆ. ಹೊಸ ಕಾಯ್ದೆ ಪ್ರಕಾರ, ಪೂಲ್ ಬಳಸುವವರು ಮಾತ್ರ ‘ಯೂಸರ್ ಫೀ’ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬಳಸದೇ ಇರುವವರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ (ಬಿಎಎಫ್‌) ಅಧ್ಯಕ್ಷ ಸತೀಶ್ ಮಲ್ಯ ತಿಳಿಸಿದರು.


ನಿರ್ವಹಣಾ ಶುಲ್ಕ ಪಾವತಿಸದಿದ್ದರೆ ಬಡ್ಡಿ: ಅಪಾರ್ಟ್‌ಮೆಂಟ್ ನಿವಾಸಿಗಳು ನಿಯಮಾನುಸಾರ ನಿಗದಿಪಡಿಸಿದ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕು. ಒಂದು ವೇಳೆ ಪಾವತಿಸುವುದು ವಿಳಂಬವಾದರೆ ಬಡ್ಡಿ ಸಮೇತ ಶುಲ್ಕ ಪಾವತಿಸಬೇಕು ಎಂದು ಸ್ಪಷ್ಟತೆ ನೀಡಲಾಗಿದೆ. ವಿಧೇಯಕದಲ್ಲಿ ಅಸೋಸಿಯೇಷನ್‌ಗಳನ್ನು ಬಲಪಡಿಸಲಾಗಿದೆ. ಈ ಮೂಲಕ ಅನೇಕ ವರ್ಷಗಳಿಂದ ಇದ್ದ ಗೊಂದಲಗಳಿಗೆ ವಿಧೇಯಕದಲ್ಲಿ ಸ್ಪಷ್ಟನೆ ನೀಡಲಾಗುತ್ತಿದೆ ಎಂದು ಬಿಎಎಫ್‌ನ ಮಾಜಿ ಅಧ್ಯಕ್ಷ ವಿಕ್ರಂ ರೈ ಹೇಳಿದರು.

ನಾನು ಫ್ಲ್ಯಾಟ್‌ನಲ್ಲಿ ವಾಸಿಸುತ್ತಿಲ್ಲ, ಕಡಿಮೆ ನೀರು, ಸೌಲಭ್ಯಗಳನ್ನು ಬಳಕೆ ಮಾಡುತ್ತಿದ್ದೇನೆ. ಹೀಗಾಗಿ, ನಿರ್ವಹಣಾ ಶುಲ್ಕ ಕಟ್ಟುವುದಿಲ್ಲ ಅಥವಾ ಕಡಿಮೆ ನಿರ್ವಹಣಾ ಶುಲ್ಕವನ್ನು ಕಟ್ಟುತ್ತೇನೆ ಎನ್ನುವುದಕ್ಕೂ ಅವಕಾಶಗಳಿಲ್ಲ. ಕಟ್ಟಡದ ಒಟ್ಟಾರೆ ನಿರ್ವಹಣೆಗಾಗಿ ಶುಲ್ಕ ಸಂಗ್ರಹಿಸುವ ಕಾರಣ ಎಲ್ಲರೂ ನಿಗದಿಪಡಿಸಿದ ಮೊತ್ತವನ್ನು ಕಟ್ಟಬೇಕು ಎನ್ನುವ ಸ್ಪಷ್ಟತೆಯು ಹೊಸ ವಿಧೇಯಕದ ಮೂಲಕ ಸಿಗುತ್ತಿದೆ ಎಂದು ವಿಕ್ರಂ ರೈ ತಿಳಿಸಿದರು.

ಎಲ್ಲರೂ ನಿರ್ವಹಣಾ ಶುಲ್ಕ ಪಾವತಿಸಬೇಕು: ಅಭಿವೃದ್ಧಿಪಡಿಸಿರುವ ಪ್ರಮೋಟರ್, ಮಾಲೀಕರು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ ಸದಸ್ಯರಾಗಿದ್ದರೆ, ಹಂಚಿಕೆಯಾಗದ, ಮಾರಾಟವಾಗದ ಫ್ಲ್ಯಾಟ್‌ಗಳನ್ನು ಹೊಂದಿದ್ದರೆ ಅವರು ಕೂಡ ಎಲ್ಲರಂತೆಯೇ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕು ಎಂದು ಹೊಸ ವಿಧೇಯಕದಲ್ಲಿ ತಿಳಿಸಲಾಗಿದೆ.