ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರ ಸಾಹಿತಿ ಡಾ ವಿ.ನಾಗೇಂದ್ರ ಪ್ರಸಾದ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ‘ಕವಿರತ್ನ ಸಾರ್ಥಕ ಸುವರ್ಣ’ ಎಂಬ ಕಾರ್ಯಕ್ರಮ ಜು.19ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಗೆವರೆಗೂ ನಡೆಯಲಿದೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಯೋಜಕ ವೀರಕಪುತ್ರ ಶ್ರೀನಿವಾಸ್ ಅವರು ಮಾತನಾಡಿ, ‘ಸಿನಿಮಾ ಬರಹದ ವ್ಯಕ್ತಿಯ ಸಾಧನೆ, ಪಯಣವನ್ನು ಇಡೀ ಚಿತ್ರರಂಗ ಸೇರಿ ಸಂಭ್ರಮಿಸುವ ಕಾರ್ಯಕ್ರಮ ಇದು. ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಕಾರ್ಯಕ್ರಮ ಆಗಿರಲಿಲ್ಲ. ಬೇರೆ ಭಾಷೆಗಳಲ್ಲಿ ಸಾಹಿತ್ಯ ಹಾಗೂ ಸಾಹಿತಿಗಳನ್ನು ಗೌರವಿಸುವ ಕೆಲಸ ಬಹಳ ದೊಡ್ಡ ಮಟ್ಟದಲ್ಲಿ ಆಗುತ್ತದೆ. ನಮ್ಮಲ್ಲಿ ಈ ರೀತಿ ಒಗ್ಗೂಡಿ ಸಂಭ್ರಮಿಸುವ ಕ್ಷಣಗಳು ಕಡಿಮೆ. ಇದು ಕನ್ನಡ ಚಿತ್ರರಂಗವನ್ನು 3 ದಶಕಗಳ ಕಾಲ ತಮ್ಮ ಹಾಡುಗಳ ಮೂಲಕ ಬೆಳಗಿದ ವಿ.ನಾಗೇಂದ್ರ ಪ್ರಸಾದ್ ಅವರ ಸಿನಿ ಜರ್ನಿಯ ಸಂಭ್ರಮಾಚರಣೆ ಕೂಡ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ‘ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನಗೆ ಕವಿ ರತ್ನ ಎಂಬ ಬಿರುದು ಕೊಟ್ಟರು. ಈಗ ಕವಿರತ್ನ ಸಾರ್ಥಕ ಸುವರ್ಣ ಕಾರ್ಯಕ್ರಮ ಹಂತಕ್ಕೆ ಬಂದಿದೆ. ವೀರಲೋಕ ಪ್ರಕಾಶನ, ವಿಷ್ಣು ಸೇನಾ ಸಮಿತಿ, ರಾಕ್‌ಲೈನ್ ವೆಂಕಟೇಶ್ ಹಾಗೂ ಒಂದಷ್ಟು ಎಫ್‌ಎಂಗಳು, ಆಡಿಯೋ ಕಂಪನಿಗಳು ಈ ಕಾರ್ಯಕ್ರಮಕ್ಕೆ ಖುಷಿಯಿಂದ ಜೊತೆಯಾಗುತ್ತಿದ್ದಾರೆ. ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಅವರ ತಂಡವು 100ಕ್ಕೂ ಹೆಚ್ಚು ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಕನ್ನಡ ಚಿತ್ರರಂಗದ ನಟ- ನಟಿಯರಿಗೆ ಆಹ್ವಾನ ನೀಡಲಾಗಿದೆ’ಎಂದು ಹೇಳಿದರು. ನಟ ಪ್ರೇಮ್ ಮಾತನಾಡಿ, ‘ಬರವಣಿಗೆ ಇದ್ದರೆ ಮಾತ್ರ ನಾಯಕ ನಟರ ಮೆರವಣಿಗೆ ಸಾಧ್ಯ. ಡಾ ವಿ.ನಾಗೇಂದ್ರ ಪ್ರಸಾದ್ ಅವರು ಬರೆದ ‘ಓ...ಗುಣವಂತ’ ಹಾಡು ನನಗೆ ಹೆಸರು ತಂದುಕೊಟ್ಟಿದೆ’ ಎಂದರು.