ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರಿನ ಸಂಪ್‌ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ತಗಾದೆ ತೆಗೆದು ಪ್ಲಂಬರ್‌ನ ಭಾಮೈದನನ ಮರ್ಮಾಂಗಕ್ಕೆ ಒದ್ದು ಹತ್ಯೆಗೈದ ಆರೋಪದ ಮೇರೆಗೆ ನಿವೇಶನದ ಮಾಲೀಕ ಹಾಗೂ ಆತನ ಇಬ್ಬರು ಪುತ್ರರು ಸೇರಿದಂತೆ 4 ಮಂದಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಿತ್ತನಹಳ್ಳಿ ನಿವಾಸಿ ರವಿ (38) ಕೊಲೆಯಾದ ವ್ಯಕ್ತಿ. ಹತ್ಯೆ ಸಂಬಂಧ ಕಡಬಗೆರೆಯ ದೇವರಾಜ್‌, ಇವರ ಮಕ್ಕಳಾದ ರಾಹುಲ್‌, ವಿನುತ್ ಹಾಗೂ ಸ್ನೇಹಿತ ವಿಘ್ನೇಶ್ ಎಂಬುವರನ್ನು ಬಂಧಿಸಲಾಗಿದೆ. ಸಂಪ್ ನಿರ್ಮಾಣ ವಿಚಾರವಾಗಿ ಪ್ಲಂಬರ್ ಮಂಜುನಾಥ್ ಹಾಗೂ ದೇವರಾಜ್ ಮಧ್ಯೆ ಗುರುವಾರ ಸಂಜೆ ನಡೆದ ಜಗಳದಲ್ಲಿ ಮಧ್ಯ ಪ್ರವೇಶಿಸಿದ ರವಿಯ ಹತ್ಯೆಯಾಗಿದೆ.

ಕಿತ್ತನಹಳ್ಳಿಯಲ್ಲಿ ಆಂಧ್ರ ಮೂಲದ ರವಿ ಹಾಗೂ ಆತನ ಭಾಮೈದ ಮಂಜುನಾಥ್ ಕುಟುಂಬಗಳು ನೆಲೆಸಿವೆ. ಮಂಜುನಾಥ್ ಕೊಳಾಯಿ ರಿಪೇರಿ (ಪ್ಲಂಬರ್) ಕೆಲಸ ಹಾಗೂ ರವಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಕಡಬಗೆರೆ ಸಮೀಪದ ತಮ್ಮ ನಿವೇಶನದಲ್ಲಿ ಸಂಪ್ ಹಾಗೂ ಶೆಡ್ ನಿರ್ಮಾಣದ ಕಾಮಗಾರಿಯನ್ನು ಮಂಜುನಾಥ್‌ಗೆ ಕಾಂಡಿಮೆಂಟ್ಸ್ ಮಾಲೀಕ ದೇವರಾಜ್ ವಹಿಸಿದ್ದರು. ಆದರೆ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಸಂಪ್ ಮುಚ್ಚಳ ಕಿತ್ತು ಬಂದಿತ್ತು. ಹೀಗಾಗಿ ದೇವರಾಜ್ ಅವರು ಕಳಪೆ ಕಾಮಗಾರಿ ಬಗ್ಗೆ ಮಂಜುನಾಥ್‌ಗೆ ಕರೆ ಮಾಡಿ ಬೈದಿದ್ದರು. ಬಳಿಕ ತಾನು ಬಂದು ಸರಿ ಮಾಡಿಕೊಡುವುದಾಗಿ ಆತ ಹೇಳಿದ್ದ. ಆದರೆ ಕೆಲಸ ಮಾಡದ ಕಾರಣ ದೇವರಾಜ್‌ ಸಿಟ್ಟಾಗಿ ಪ್ಲಂಬರ್‌ಗೆ ಗುರುವಾರ ನಿರಂತರವಾಗಿ ಅವರು ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಿಲ್ಲ.

ಇದರಿಂದ ಕೆರಳಿದ ಅವರು, ತಮ್ಮ ಇಬ್ಬರು ಮಕ್ಕಳು ಹಾಗೂ ಸ್ನೇಹಿತ ವಿಘ್ನೇಶ್‌ನನ್ನು ಕರೆದುಕೊಂಡು ಮಂಜುನಾಥ್‌ ಮನೆ ಬಳಿ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಮಂಜುನಾಥ್ ಮೇಲೆ ಆರೋಪಿಗಳು ಗಲಾಟೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ಪರಸ್ಪರ ತಳ್ಳಾಟ ನೂಕಾಟವಾಗಿದೆ. ಅದೇ ವೇಳೆ ಮಂಜುನಾಥ್ ಬೆಂಬಲಕ್ಕೆ ಆತನ ಭಾಮೈದ ರವಿ ಬಂದಿದ್ದಾನೆ. ಈ ಜಗಳದ ಮಧ್ಯೆ ಆತನ ಮರ್ಮಾಂಗಕ್ಕೆ ದೇವರಾಜ್ ಪುತ್ರ ರಾಹುಲ್ ಬಲವಾಗಿ ಒದ್ದಿದ್ದಾನೆ. ಈ ಹೊಡೆತದಿಂದ ಆತ ಕುಸಿದು ಬಿದ್ದು ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ರವಿ ಕೊನೆಯುಸಿರೆಳೆದಿದ್ದಾನೆ.


ಈ ಗಲಾಟೆ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮಾದನಾಯನಕಹಳ್ಳಿ ಠಾಣೆ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.