ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದ ಯೋಧರ ಆರೋಗ್ಯ ರಕ್ಷಣೆಯಲ್ಲಿ ಕೆಎಲ್‌ಇ ಸಂಸ್ಥೆ ನೀಡುತ್ತಿರುವ ಸೇವೆ ಅತ್ಯಂತ ಶ್ಲಾಘನೀಯವಾಗಿದ್ದು, ಭಾರತೀಯ ಸೇನೆ ಸದಾ ಕೃತಜ್ಞವಾಗಿರಲಿದೆ ಎಂದು ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ ಉಪಾಧ್ಯೆ ಹೇಳಿದರು.

ನಗರದ ಸ್ವರೂಪ್‌ ನರ್ತಕಿ ಚಿತ್ರಮಂದಿರದಲ್ಲಿ ಶುಕ್ರವಾರ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ಸಂಸ್ಥೆಗಳ ವತಿಯಿಂದ ಪದ್ಮಶ್ರೀ ಪುರಸ್ಕೃತ, ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಚಿಕಿತ್ಸೆಗಾಗಿ ಪುಣೆ ಹಾಗೂ ಮುಂಬೈನ ಕಮಾಂಡ್ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿತ್ತು. ಆದರೆ, ಈಗ ಇಸಿಎಚ್‌ಎಸ್ ಯೋಜನೆಯಡಿ ಕೆಎಲ್‌ಇ ಆಸ್ಪತ್ರೆಯಲ್ಲೇ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ತರಬೇತಿ ವೇಳೆ ಗಾಯಗೊಂಡ ಸೈನಿಕರಿಗೆ ಯಾವುದೇ ದಾಖಲೆ ಪ್ರಕ್ರಿಯೆಗಾಗಿ ಕಾಯದೇ ಮೊದಲು ಚಿಕಿತ್ಸೆ ನೀಡುವ ಮೂಲಕ ಕೆಎಲ್‌ಇ ಆಸ್ಪತ್ರೆ ಜೀವದಾತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು. ಪದ್ಮಶ್ರೀ ಪುರಸ್ಕೃತ ಹಾಗೂ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆ ಇಂದು 12 ಸಾವಿರ ಸದಸ್ಯರನ್ನು ಹೊಂದಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. 1983ರ ಚುನಾವಣೆಯಲ್ಲಿ 700ಕ್ಕೂ ಅಧಿಕ ಮತಗಳ ಅಂತರದಿಂದ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭವನ್ನು ನೆನಪಿಸಿಕೊಂಡರು.

ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ತಮ್ಮ ಸಹೋದರರ ಕನಸಿನಂತೆ ರೈತರ ಹಿತದೃಷ್ಟಿಯಿಂದ ಆರಂಭವಾದ ಕಾರ್ಖಾನೆ ಇಂದು ದಿನಕ್ಕೆ 12 ಸಾವಿರ ಟನ್ ಕಬ್ಬು ಅರೆಯುವ ಹಾಗೂ 3 ಲಕ್ಷ ಲೀಟರ್ ಎಥನಾಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ರಾಜ್ಯದ ಅತ್ಯುತ್ತಮ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದೆ. ರೈತರಿಗೆ ದೇಶದಲ್ಲೇ ಅತೀ ಹೆಚ್ಚು ಕಬ್ಬಿನ ದರ ನೀಡುತ್ತಿರುವ ಹೆಗ್ಗಳಿಕೆಯೂ ಈ ಕಾರ್ಖಾನೆಗೆ ಸಲ್ಲುತ್ತದೆ ಎಂದು ತಿಳಿಸಿದರು.ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ, ಅವಿನಾಶ ಪೋತದಾರ, ಶಿರೀಶ ಗೋಗಟೆ, ಆಶಾ ಕೋರೆ, ಪ್ರೀತಿ ಕೋರೆ ದೊಡ್ಡವಾಡ ಮೊದಲಾದವರು ಉಪಸ್ಥಿತರಿದ್ದರು.ಉತ್ತರ ಕರ್ನಾಟಕ, ಗೋವಾ ಹಾಗೂ ಕೊಲ್ಲಾಪೂರ ಭಾಗದ ಸುಮಾರು ಶೇ.90 ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಗೆ ಅವಲಂಬಿತರಾಗಿದ್ದಾರೆ.

-ಗಿರೀಶ ಉಪಾಧ್ಯೆ,


ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್.