ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಾತಿ-ಧರ್ಮಕ್ಕಿಂತ ಮಾನವೀಯತೆಯೂ ಮುಖ್ಯವಾಗಿದ್ದು, ಜ್ಞಾನದ ಜೊತೆಗೆ ಸಂಸ್ಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪಡೆದಿರುವ ಶಿಕ್ಷಣವು ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಕಾಂಬಳೆ ಹೇಳಿದರು.ನಗರದ ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ಬಿ.ವಿ.ವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡಾ, ಸಾಂಸ್ಕೃತಿಕ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂದೆ-ತಾಯಿ ಹಾಗೂ ಗುರುಗಳಿಗೆ ಗೌರವ ನೀಡಬೇಕು. ದುಶ್ಚಟಗಳಿಂದ ದೂರವಿದ್ದು, ಸಮಯವನ್ನು ಓದಿಗೆ ಮೀಸಲಿಡಬೇಕು. ಭಾಷೆ ಮುಖ್ಯವಲ್ಲ, ಭಾವನೆಯೇ ಮುಖ್ಯ. ಇಂದಿನ ದಿನಗಳಲ್ಲಿ ಜ್ಞಾನದ ಜೊತೆಗೆ ಸಂಸ್ಕಾರವೂ ಅತ್ಯಗತ್ಯವಾಗಿದ್ದು, ಜ್ಞಾನ ಇದ್ದರೂ ಸುಸಂಸ್ಕೃತಿ ಇಲ್ಲದಿದ್ದರೆ ಅದರ ಮೌಲ್ಯವೂ ಕಡಿಮೆಯಾಗುತ್ತದೆ. ಬೇರೆಯವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ, ಅದನ್ನು ಸಾಧಿಸಲು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ನಿರಂತರವಾಗಿ ಶ್ರಮಿಸಬೇಕು. ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಿದಾಗ ಮಾತ್ರ ಆದರ್ಶ ನಾಗರಿಕರಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಡಾ.ಪ್ರಮೋದ ಮಿರ್ಜಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ಆಹಾರ ಸೇವಿಸಬೇಕು. ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ಜ್ಞಾನ ಹಾಗೂ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಮಾತನಾಡಿ, ಬಿವಿವಿ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಜ್ಞಾನದ ಜತೆಗೆ ಬದುಕಿಗೆ ಅಗತ್ಯವಿರುವ ಜೀವನ ಮೌಲ್ಯಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಧಿಸಿರುವ ಯಶಸ್ಸು ಸಂಸ್ಥೆಯ ಹೆಮ್ಮೆಯಾಗಿದೆ ಎಂದು ಹೇಳಿದರು.ಪ್ರತಿಭಾ ಪುರಸ್ಕಾರ: ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ್, ಡಾ.ಎಸ್.ಎಸ್.ಬಸಪ್ಪನವರ, ಬಿ.ಐ.ಬೋಡನಾಯಕದಿನ್ನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪಿ.ವೈ.ಮಾಳಿ ಮಾತನಾಡಿದರು. ಡಾ.ಎಂ.ಎ.ಪಾಟೋಳಿ ಪರಿಚಯಿಸಿದರು, ಅನ್ನಪೂರ್ಣ ಪಾಟೀಲ ಹಾಗೂ ಡಾ.ಎಸ್.ಆರ್.ಕುಲಕರ್ಣಿ ನಿರೂಪಿಸಿದರು.
ಗಮನ ಸೆಳೆದ ವಂದೇ ಮಾತರಂ: ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಸುಮಧುರವಾಗಿ ಹಾಡಿದ ವಂದೇ ಮಾತರಂ ಗೀತೆ , ಶ್ರೇಯಾ ಕುಲಕರ್ಣಿ ಅವರ ಸ್ವಾಗತ ನೃತ್ಯ ಹಾಗೂ ಅಕ್ಷರಾ ಮತ್ತು ಆದ್ವಿತಾ ಗಣನಾಥ ಅವರ ಪ್ರಾರ್ಥನೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.