ನಗರದ ರಸ್ತೆ ಬದಿ, ಪಾದಚಾರಿ ಮಾರ್ಗಗಳ ಮೇಲೆ ಅನೇಕ ತಿಂಗಳು, ವರ್ಷಗಳಿಂದ ನಿಲ್ಲಿಸಿರುವ ನಿರ್ಲಕ್ಷಿತ, ಅನಾಥ ವಾಹನಗಳನ್ನು ಟೋಯಿಂಗ್ ಮಾಡುವ ಕಾರ್ಯಾಚರಣೆ ಶನಿವಾರ ಗಾಂಧಿನಗರ ಕ್ಷೇತ್ರದಲ್ಲಿ ಆರಂಭವಾಯಿತು.
ಬೆಂಗಳೂರು : ನಗರದ ರಸ್ತೆ ಬದಿ, ಪಾದಚಾರಿ ಮಾರ್ಗಗಳ ಮೇಲೆ ಅನೇಕ ತಿಂಗಳು, ವರ್ಷಗಳಿಂದ ನಿಲ್ಲಿಸಿರುವ ನಿರ್ಲಕ್ಷಿತ, ಅನಾಥ ವಾಹನಗಳನ್ನು ಟೋಯಿಂಗ್ ಮಾಡುವ ಕಾರ್ಯಾಚರಣೆ ಶನಿವಾರ ಗಾಂಧಿನಗರ ಕ್ಷೇತ್ರದಲ್ಲಿ ಆರಂಭವಾಯಿತು.
ಶನಿವಾರ ಗಾಂಧಿ ನಗರದ ಎಂ.ಡಿ.ಬ್ಲಾಕ್‌ನಲ್ಲಿ ಟೋಯಿಂಗ್ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ನಿರ್ಲಕ್ಷಿತ ವಾಹನಗಳಿಂದ ಟ್ರಾಫಿಕ್ ಜಾಮ್ ಆಗುವ ಜತೆಗೆ ಜನರಿಗೆ ತೊಂದರೆ ಆಗುತ್ತಿದೆ. ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕ ರಸ್ತೆಯನ್ನು ಗುಜರಿ ಅಂಗಡಿ ಮಾಡಿಕೊಳ್ಳಲು ಬಿಡುವುದಿಲ್ಲ ಎಂದರು.
ಈವರೆಗೂ 1000ಕ್ಕೂ ಹೆಚ್ಚು ವಾಹನಗಳಿಗೆ ನೋಟಿಸ್ ನೀಡಲಾಗಿದೆ. 1 ವಾರದ ನೋಟಿಸ್ ಅವಧಿ ಮುಗಿಯುತ್ತಿದ್ದಂತೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತದೆ. ಇಂತಹ ವಾಹನಗಳನ್ನು ನಿಲ್ಲಿಸಲು ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ಮಾಲೀಕರು ವಾಹನ ತೆಗೆದುಕೊಂಡು ಹೋಗದಿದ್ದರೆ ಹರಾಜು ಹಾಕಿ ವಿಲೇವಾರಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಪೊಲೀಸ್ ಠಾಣೆ ಬಳಿ ನಿಲ್ಲಿಸಿರುವ ವಾಹನಗಳನ್ನು ತೆರವು ಕೋರಿ ಜನರು ಮನವಿ ಮಾಡಿದ್ದಾರೆ. ಆ ವಾಹನಗಳ ಮೇಲೆ ಕೇಸ್ ಇವೆ. ಹೀಗಾಗಿ, ಕಾನೂನಾತ್ಮಕವಾಗಿಯೇ ತೆರವುಗೊಳಿಸಬೇಕಾಗುತ್ತದೆ. ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಬೇಗ ವಿಲೇವಾರಿ ಮಾಡಿಸಲು ಪ್ರಯತ್ನಿಸುತ್ತೇವೆ. ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್, ಬಸ್ ನಿಲ್ದಾಣ, ಶೌಚಾಲಯಗಳನ್ನು ಕೂಡ ಸೂಕ್ತ ರೀತಿಯಲ್ಲಿ ಸ್ಥಳಾಂತರಿಸಲು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದೇನೆ. ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ವೇಳೆ ಶಾಸಕ ದಿನೇಶ್ ಗುಂಡೂರಾವ್, ಕೇಂದ್ರ ಪಾಲಿಕೆ ಆಯುಕ್ತ ಜಿ. ಜಗದೀಶ್ ಹಾಗೂ ಮತ್ತಿತರರಿದ್ದರು.
ಅಸ್ತ್ರಂ ತಂತ್ರಾಂಶದಲ್ಲಿ ಅನಾಥ ವಾಹನಗಳ ಮಾಹಿತಿ
ಲಕ್ಕಸಂದ್ರ, ಮೈಸೂರು ಲ್ಯಾಂಪ್ಸ್, ಚಂದ್ರ ಲೇಔಟ್, ಚಿಕ್ಕಲಸಂದ್ರ, ಕೋಗಿಲು, ಬನ್ನೇರುಘಟ್ಟ ರಸ್ತೆ, ರಾಗಿ ಗುಡ್ಡ ಮೆಟ್ರೋ ನಿಲ್ದಾಣ, ಕದಿರೇನಹಳ್ಳಿ, ಎಇಸಿಎಸ್ ಲೇಔಟ್, ಬೊಮ್ಮನಹಳ್ಳಿ.
ಟೋಯಿಂಗ್ ಮಾಡುವಾಗ ಬಂದ ಮಾಲೀಕರು!
ಗಾಂಧಿ ನಗರದಲ್ಲಿ ನೋಟಿಸ್ ಅಂಟಿಸಿ 1 ವಾರ ಕಳೆದರೂ ಅವುಗಳನ್ನು ತೆರವುಗೊಳಿಸದ ಅನಾಥ ವಾಹನದ ಮಾಲೀಕರು, ಟೋಯಿಂಗ್ ಮಾಡಲು ವಾಹನ ಬರುತ್ತಿದ್ದಂತೆ ದಂಡ ಕಟ್ಟಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ. ಅಲ್ಲದೇ, ವಾಹನವನ್ನು ನಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದೇ ರೀತಿ ನಗರದ ನಾನಾ ಭಾಗಗಳಲ್ಲಿ ವಾಹನ ಸವಾರರು ಕೊನೆ ಕ್ಷಣದಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಸಚಿವ ಸ್ಥಾನ ವರಿಷ್ಠರ ನಿರ್ಧಾರ
ಸಚಿವ ಸಂಪುಟ ವಿಸ್ತರಣೆ ಮತ್ತು ನನಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಅವರೇ ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಶಾಸಕ ದಿನೇಶ್ ಗುಂಡೂರಾವ್ ಉತ್ತರಿಸಿದರು.
