ಮಳವಳ್ಳಿ:
ತಾಲೂಕಿನ ವಡ್ಡರಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎನ್. ನಂಜುಂಡೇಗೌಡ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಎನ್.ರೋಹಿತ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ನಂಜುಂಡೇಗೌಡರು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಸಂತೋಷ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ನಂಜುಂಡೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರೈತರ ಏಳ್ಗೆ ಮತ್ತು ಆರ್ಥಿಕ ಭದ್ರತೆಗೆ ಸಂಘವು ಸಹಕಾರಿಯಾಗಿದೆ. ನಿರ್ದೇಶಕರ ವಿಶ್ವಾಸದೊಂದಿಗೆ ಸಂಘಟಿತ ಪ್ರಯತ್ನದೊಂದಿಗೆ ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಸಲಹೆ- ಸಹಕಾರದೊಂದಿಗೆ ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುವುದಾಗಿ ಹೇಳಿದರು.
ಈ ವೇಳೆ ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ಕೆ.ಜೆ ದೇವರಾಜು,ವಿಶ್ವ (ದಿಲೀಪ್), ಮಾಜಿ ಅಧ್ಯಕ್ಷ ದ್ಯಾಪೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಕಾಂಗ್ರೆಸ್ ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಸವಿತಾ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶ್ರೀಕಾಂತ್, ಮುಖಂಡ ಬಂಕ್ ಮಹದೇವು, ಎಸ್.ಚೌಡೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಉಮೇಶ್, ವಡ್ಡರಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್ ರೋಹಿತ್, ನಿರ್ದೇಶಕರಾದ ವಿ.ಎನ್ ಮನು, ಜವರಾಯ್ಯ, ರುದ್ರಮ್ಮ, ಮಹದೇವಮ್ಮ, ಬಸವರಾಜು ಸೇರಿದಂತೆ ಸಂಘದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಪಾಂಡವಪುರ:ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಬಯಸಿ ಟಿಎಪಿಸಿಎಂಎಸ್ ನಿರ್ದೇಶಕ ಹರಳಹಳ್ಳಿ ಎಚ್.ಎನ್.ಚಿಟ್ಟಿಬಾಬು ನಾಮಪತ್ರ ಸಲ್ಲಿಸಿದರು.ಸಹಕಾರ ಇಲಾಖೆಯ ಪ್ರಾಣೇಶ್ ಅವರಿಗೆ ಎಚ್.ಎನ್.ಚಿಟ್ಟಿಬಾಬು ಅವರು ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ ವರ್ಗದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಕಳೆದ ಎರಡು ಬಾರಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಹರಳಹಳ್ಳಿ ಎಚ್.ಎನ್.ಚಿಟ್ಟಿಬಾಬು ಅವರು ನಿರ್ದೇಶಕ ಸ್ಥಾನಕ್ಕೆ ಸತತ ನಾಲ್ಕನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಜಿ.ಇ.ರವಿಕುಮಾರ್, ಮಾಜಿ ಉಪಾಧ್ಯಕ್ಷ ಸಿ.ಆರ್.ರಮೇಶ್, ಮಾಜಿ ನಿರ್ದೇಶಕ ಬಿ.ಎಸ್.ಜಯರಾಂ ಸೇರಿದಂತೆ ಇತರರಿದ್ದರು.