ಕನ್ನಡಪ್ರಭ ವಾರ್ತೆ ಹಾಸನ

ಬೆಂಗಳೂರಿನ ರೌಡಿಶೀಟರ್‌ ಮಂಜೇಶ್ ಕುಮಾರ್‌ ಹತ್ಯೆ ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದ್ದು, ಸುಮಾರು 14 ವರ್ಷಗಳ ಹಿಂದಿನ ವೈಷಮ್ಯವೇ ಈ ಭೀಕರ ಕೊಲೆಗೆ ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಮಂದಿಯನ್ನು ಬಂಧಿಸಿರುವ ಪೊಲೀಸರು, ಹತ್ಯೆಯ ಹಿಂದಿನ ಸಂಚು, ಹಣಕಾಸಿನ ವ್ಯವಹಾರ ಹಾಗೂ ಹಳೆಯ ಅಪರಾಧ ಜಾಲದ ಕುರಿತು ಸವಿಸ್ತಾರ ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಮಂಜೇಶ್ ಹಾಗೂ ಎ1 ಆರೋಪಿ ಪರಮೇಶ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ತಮ್ಮ ಸಹಚರರೊಂದಿಗೆ ಸೇರಿ ಕೊಲೆ, ಸುಲಿಗೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆದರೆ 2012ರಲ್ಲಿ ನಡೆದ ಒಂದು ಕೊಲೆ ಪ್ರಕರಣದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಅದು ಕ್ರಮೇಣ ತೀವ್ರ ಹಗೆತನವಾಗಿ ಬೆಳೆದಿತ್ತು. ವರ್ಷಗಳಿಂದ ಕುದಿಯುತ್ತಿದ್ದ ಆ ದ್ವೇಷವೇ ಇದೀಗ ಮಂಜೇಶ್ ಹತ್ಯೆಯೊಂದಿಗೆ ಅಂತ್ಯ ಕಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಕೊಲೆಯ ನಿಖರ ಉದ್ದೇಶ ಹಾಗೂ ಹಿನ್ನೆಲೆಯ ಕುರಿತು ಇನ್ನೂ ತನಿಖೆ ನಡೆಯುತ್ತಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ಎಸ್ಪಿ ತಿಳಿಸಿದರು.

16 ಆರೋಪಿಗಳ ಬಂಧನ ಜುಲೈ 7ರ ತಡರಾತ್ರಿ ಹಾಸನದಲ್ಲಿ ನಡೆದ ಮಂಜೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ಠಾಣೆ ಪೊಲೀಸರು ಹಾಗೂ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ 16 ಆರೋಪಿಗಳನ್ನು ಬಂಧಿಸಿದೆ. ಬಂಧಿತರಲ್ಲಿ ಎ1 ಆರೋಪಿ ಪರಮೇಶ್, ಪುನೀತ್, ಶಶಿಧರ್‌, ಜಯಂತ್, ರಾಕೇಶ್, ಯಲ್ಲಾಲಿಂಗ, ಸಾಯಿನಾಥ್, ಭರತ್, ಆದಿತ್ಯ, ವಿಕಾಸ್, ಆಕಾಶ್, ಗಂಗಾಧರ್, ಉಮೇಶ್, ಪ್ರದೀಪ್, ಇರ್ಫಾನ್ ಹಾಗೂ ಆಯೂಬ್ ಖಾನ್ ಸೇರಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಗಳ ಬಹುತೇಕರು ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಳೆಯ ಅಪರಾಧಿಗಳಾಗಿದ್ದಾರೆ.

ಎಲ್ಲರೂ ಹಳೇ ಅಪರಾಧ ಹಿನ್ನೆಲೆಯವರು ಎ1 ಆರೋಪಿ ಪರಮೇಶ್ ವಿರುದ್ಧ ೪ ಕೊಲೆ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಎ2 ಆರೋಪಿ ಪುನೀತ್ ವಿರುದ್ಧ 13 ಪ್ರಕರಣಗಳು ಇದ್ದರೆ, ಕೊಲೆಯಾದ ಮಂಜೇಶ್ ವಿರುದ್ಧ 4 ಕೊಲೆ ಪ್ರಕರಣಗಳು ಸೇರಿದಂತೆ 8 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರಿನಲ್ಲಿ ಶರಣಾದ ಪರಮೇಶ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಎ1 ಆರೋಪಿ ಪರಮೇಶ್ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಬಳಿಕ ಹಾಸನ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯ ಹಿಂದೆ ಹಲವು ಆಯಾಮಗಳಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ಸಂಪೂರ್ಣ ಸತ್ಯ ಹೊರಬೀಳಲಿದೆ ಎಂದು ಎಸ್ಪಿ ಹೇಳಿದರು.


ಕೊಲೆಗೆ ರೂಪಿಸಿದ್ದ ಸಂಚು ಹೇಗೆ ಪೊಲೀಸರ ತನಿಖೆ ಪ್ರಕಾರ, ಮಂಜೇಶ್ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಗಡಿಪಾರು ಆದ ದಿನದಿಂದಲೇ ಆತನನ್ನು ಹತ್ಯೆ ಮಾಡಲು ಪರಮೇಶ್ ಹಾಗೂ ಆತನ ತಂಡ ಸಂಚು ರೂಪಿಸಿತ್ತು. ಮಂಜೇಶ್‌ನ ಚಲನವಲನಗಳ ಮೇಲೆ ನಿಗಾ ಇಡಲು ಚಿಕ್ಕಮಗಳೂರಿನಲ್ಲೇ ಒಬ್ಬ ಸಹಚರನನ್ನ ನಿಯೋಜಿಸಲಾಗಿತ್ತು. ಜುಲೈ 7ರಂದು ಪರಿಚಿತ ವ್ಯಕ್ತಿಯ ಮೂಲಕ ಕರೆ ಮಾಡಿಸಿ, ಚಿಕ್ಕಮಗಳೂರಿನಿಂದ ಹೊರಡುವಂತೆ ಮಂಜೇಶ್‌ಗೆ ಪ್ರೇರೇಪಿಸಲಾಯಿತು. ರಾತ್ರಿ ಸುಮಾರು11ಗಂಟೆಗೆ ಮಂಜೇಶ್ ಸಾರಿಗೆ ಬಸ್ ಹತ್ತಿದ ತಕ್ಷಣವೇ ಹಂತಕರ ತಂಡ ಆತನನ್ನು ಹಿಂಬಾಲಿಸಿತು. ಇದಕ್ಕೂ ಮುನ್ನವೇ ಆರೋಪಿಗಳ ತಂಡ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿ ಸಿದ್ಧತೆ ಮಾಡಿಕೊಂಡಿತ್ತು. ಬಸ್ ಅನ್ನು ಹಿಂಬಾಲಿಸಿಕೊಂಡು ಹಾಸನಕ್ಕೆ ಬಂದ ಆರೋಪಿಗಳು, ಸೂಕ್ತ ಅವಕಾಶ ಕಂಡು ಮಂಜೇಶ್‌ನ ಮೇಲೆ ಮಾರಕ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದರು. ಪ್ರಕರಣದಲ್ಲಿ ಬಂಧಿತ ಆರೋಪಿಗಳೆಲ್ಲರೂ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಹತ್ಯೆಗೆ ವೈಯಕ್ತಿಕ ದ್ವೇಷ, ಹಳೆಯ ಗ್ಯಾಂಗ್ ವೈಷಮ್ಯ, ಹಣಕಾಸಿನ ವ್ಯವಹಾರ ಅಥವಾ ಇತರ ಕಾರಣಗಳಿವೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಇಬ್ಬರು, ಕಾಲಕ್ರಮೇಣ ಕಡುಶತ್ರುಗಳಾಗಿ ಅಂತಿಮವಾಗಿ ರಕ್ತಸಿಕ್ತ ಪ್ರತೀಕಾರದಲ್ಲಿ ಮುಖಾಮುಖಿಯಾಗಿರುವ ಈ ಪ್ರಕರಣ ರಾಜ್ಯದ ಭೂಗತ ವಲಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.