ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸತತ 26 ಗಂಟೆಗಳ ಕಾಲ ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಜಬ್ಬೀವುಲ್ಲಾ ಖಾನ್ ಕರೆ ನೀಡಿದರು.

ಟೀಮ್ ಮಳವಳ್ಳಿ ಹಾಗೂ ಮಳವಳ್ಳಿ ಯುವಕ ಮಿತ್ರರು ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರದ ಹಿನ್ನೆಲೆಯಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿ, ರಕ್ತದಾನವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಜಾತ್ಯತೀತವಾಗಿ ಅವಶ್ಯಕವಾಗಿರುವ ರಕ್ತವನ್ನು ದಾನ ಮಾಡುವ ಕಾರ್ಯ ಶ್ರೇಷ್ಠವಾಗಿದೆ. ಎಲ್ಲರೂ ರಕ್ತದಾನಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಅಪಘಾತ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಜೀವ ಉಳಿಸುವ ಕಾರ್ಯಕ್ಕೆ ರಕ್ತದ ಅವಶ್ಯಕತೆ ಇದೆ. ಪಟ್ಟಣದಲ್ಲಿ ಇರುವ ಮುಸ್ಲಿಮರು ಆಗಸ್ಟ್ 15ರಂದು ರಕ್ತದಾನದಂಥ ಮಹತ್ಕಾರ್ಯಕ್ಕೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.

ಪುರಸಭೆ ಮಾಜಿ ಸದಸ್ಯ ಮೆಹಬೂಬ್ ಪಾಷಾ ಮಾತನಾಡಿ, ಎಲ್ಲ ದಾನಗಳಲ್ಲೂ ರಕ್ತದಾನ ಶ್ರೇಷ್ಠವಾಗಿದೆ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಜೀವಗಳ ರಕ್ಷಣೆಗೆ ಮುಂದಾಗಬೇಕು. ಕಳೆದ ಹಲವಾರು ವರ್ಷಗಳಿಂದಲೂ ಮುಸ್ಲಿಮರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಹೇಳಿದರು.


ರೋಟರಿ ಸಂಸ್ಥೆ ಸದಸ್ಯ ಅತೀಕ್ ಖರ್ ರೆಹಮಾನ್ ಮಾತನಾಡಿ, ಸಮಾಜಮುಖಿ ಕಾರ್ಯಕ್ಕೆ ಜಾತ್ಯತೀತವಾಗಿ ಎಲ್ಲರೂ ಬೆಂಬಲಿಸಬೇಕು. ಅಪಘಾತ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.

ಮುಖಂಡರಾದ ಕಮಲ್ ಪರೀಷ್ ಹಾಗೂ ಅಖಿಲ್ ಮಾತನಾಡಿ, ಸತತ 26 ಗಂಟೆಗಳ ಕಾಲ ನಡೆಯುವ ಶಿಬಿರದಲ್ಲಿ ಆರೋಗ್ಯವಂತ ಎಲ್ಲರೂ ರಕ್ತದಾನ ಮಾಡೋಣ ಎಂದು ಕರೆ ನೀಡಿದರು.

ಈ ವೇಳೆ ಟೀಮ್ ಮಳವಳ್ಳಿ ಹಾಗೂ ಮಳವಳ್ಳಿ ಯುವಕ ಮಿತ್ರ ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.