ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಾಸಕ, ಸಚಿವರನ್ನು ಖರೀದಿಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಅವರು ಬೇರೆ ಪಕ್ಷಗಳಿಗೆ ಖರೀದಿ ಆಗಿರುವ ರೂಢಿಯೂ ಇದೆ. ಹೀಗಾಗಿ ವಿಪಕ್ಷ ನಾಯಕರು ಪೇಮೆಂಟ್ ವಿಚಾರ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.ಸಮೀಪದ ಬಿದರಹೊಸಹಳ್ಳಿಯಲ್ಲಿ ₹3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ಧಿಗಾರರರೊಂದಿಗೆ ಮಾತನಾಡಿ, ಸಿಎಂ ಡಿ.ಕೆ.ಶಿವಕುಮಾರ್ ರ ಸಚಿವ ಸಂಪುಟ ಸ್ಥಾನಕ್ಕೆ ಪೇಮೆಂಟ್ ನಡೆಯುತ್ತಿದೆ ಎಂಬ ವಿಪಕ್ಷದವರ ಟೀಕೆಗೆ ತಿರುಗೇಟು ನೀಡಿದರು.
ನಮ್ಮ ಶಾಸಕರು ಯಾರು ಅವರ ರೀತಿ ಮಾರಾಟವಾಗುವುದಿಲ್ಲ. ಆ ಕಾರಣಕ್ಕೆ ಹೈಕಮಾಂಡ್ ಹತ್ತಿರ ಹೋಗಿಲ್ಲ. ಹೋರಾಟಗಾರ, ಉತ್ತಮ ನಾಯಕ ಯಡಿಯೂರಪ್ಪ ಅವರು ಮುಂಚೂಣಿಯಲ್ಲಿದ್ದಾಗಲೇ ಬಹುಮತ ಪಡೆಯಲು ಬಿಜೆಪಿಗೆ ಆಗಲಿಲ್ಲ. ಈಗ ಗೆದ್ದು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಅಧಿಕಾರಕ್ಕೆ ಬಿಡದಿ ಟೌನ್ ಶಿಪ್ ರದ್ದು ಮಾಡುತ್ತೇವೆ ಎಂಬ ಆರ್.ಅಶೋಕ್ ಹೇಳಿಕೆಗೆ ಲೇವಡಿ ಮಾಡಿದರು.ನನಗೆ ಅಧಿಕಾರದ ಆಸೆ ಇಲ್ಲ, 60:40 ಹೊಸಬರ ಪಟ್ಟಿಯಲ್ಲಿ ನಾನಿಲ್ಲ. ನನಗೆ ಸಚಿವ ಸ್ಥಾನದ ಆಸೆಯೂ ಇಲ್ಲ, ನಮ್ಮಲ್ಲಿ ಸಾಕಷ್ಟು ಹಿರಿಯದ್ದಾರೆ, ಅವರಿಗೆ ಅಧಿಕಾರ ಕೊಡಬೇಕು. ಈ ಹಿಂದೆ ಹೈಕಮಾಂಡ್ ಬಳಿ ಮನವಿ ಮಾಡಿದ್ದು ನಿಜ. ಆದರೆ, ಆ ರೇಸ್ ನಲ್ಲಿ ನಾನಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮದ್ದೂರು ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕಳೆದ 15ವರ್ಷಗಳಿಂದ ನಡೆಯದ ಕಾಮಗಾರಿಗಳನ್ನು ಹಂತ ಹಂತವಾಗಿ ನೆರವೇರಿಸುತ್ತ ಬಂದಿದ್ದೇನೆ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಆದ್ದರಿಂದ ನೀವು ನನ್ನ ಜೊತೆ ಕೈಜೋಡಿಸಬೇಕು ಎಂದರು.
ನಿಮ್ಮ ವ್ಯಾಪ್ತಿಯ ಕಾಮಗಾರಿ ಕಳಪೆ ಎಂದು ಕಂಡುಬಂದರೆ ಕೂಡಲೇ ನನ್ನ ಗಮನಕ್ಕೆ ತಂದರೆ ಅದನ್ನು ಉತ್ತಮವಾಗಿ ಮಾಡಿಸಲು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ. ಮಂಡ್ಯ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ವಿಚಾರವಾಗಿ ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದೆ. ಶೀಘ್ರ ಘೋಷಣೆ ಆಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಈ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್, ನಿವೃತ್ತ ಪ್ರಾಧ್ಯಾಪಕ ಬಿ.ಎಸ್ ಬೋರೇಗೌಡ, ಪಾಪಣ್ಣ, ಚಿದಂಬರ, ಪ್ರೇಮ್ ಕುಮಾರ್, ಹನುಮಂತ್, ಅನಿಲ್ ಹನುಮೇಶ್, ಕಿರಣ್, ದೇವೇಗೌಡ ಮತ್ತಿತರರು ಇದ್ದರು.