ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅರ್ಚಕನನ್ನು ಕೊಲೆ ಮಾಡಿದ್ದ ಆತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರನ್ನು ಮಾ.6ರ ರಾತ್ರಿ ಆತನ ಪತ್ನಿ ಶಾಲಿನಿ (32), ಹರೀಶ್‌ ಎಂ.ಸಿ. (33), ಸಂತೋಷ್ ಕುಮಾರ್ ಎಂ.ಆರ್ (29), ಗಣೇಶ್‌ ಬಿ.ಆರ್ (29) ಈ ನಾಲ್ವರು ಆರೋಪಿಗಳು ಕೊಲೆ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೆ.ಶೆಟ್ಟಹಳ್ಳಿಯ ಗಣಪತಿ ದೇವಸ್ಥಾನಕ್ಕೆ ಪೂಜೆ ಮುಗಿಸಿ ರಾತ್ರಿ ಮನೆಗೆ ತೆರಳಿದ್ದ ಮೃತ ಅರ್ಚಕ ಸಿದ್ದಲಿಂಗಪ್ಪ ಬಾರದೇ ಇದ್ದಾಗ ಮಧ್ಯರಾತ್ರಿ ಹುಡುಕಾಟ ನಡೆಸಿದಾಗ ರಾತ್ರಿ ಸಿಡಿಎಸ್ ಕಾಲುವೆ ತೂಬಿನ ಹತ್ತಿರ ರಸ್ತೆಯಲ್ಲಿ ಚಪ್ಪಲಿ ಮತ್ತು ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿದ್ದು, ಅಕ್ಕ ಪಕ್ಕದಲ್ಲಿ ಅರ್ಚಕ ಧರಿಸುತ್ತಿದ್ದ ರುದ್ರಾಕ್ಷಿಮಣಿ ಸ್ಪಟಿಕಮಣಿ ಸರಗಳ ಡಾಲರ್‌, ಅರ್ಚಕನ ಬೈಕ್ ಕಾಲುವೆ ಒಳಗೆ ಬಿದ್ದಿದ್ದು ರಾತ್ರಿ ಹುಡುಕಿದರೂ ಅರ್ಚಕ ಮಾತ್ರ ಪತ್ತೆಯಾಗಿರಲಿಲ್ಲ.

ನಂತರ ಮಾ.7ರ ಬೆಳಗ್ಗೆ ಗ್ರಾಮದ ಸಿಡಿಎಸ್ ನಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪನ ಶವವು ಸಿಕ್ಕಿಕೊಂಡಿತ್ತು. ಮುಖಕ್ಕೆ, ತಲೆಗೆ ಗಾಯಗಳಾಗಿತ್ತು. ಯಾರೋ ಅಪರಿಚಿತ ವ್ಯಕ್ತಿಗಳು ಹೊಡೆದು ಕೊಲೆ ಮಾಡಿರುವ ಬಗ್ಗೆ ಮೃತನ ಅಣ್ಣ ಬಾಲಸುಂದರ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.


ನಂತರ ಪೊಲೀಸರು ಪ್ರಕರಣ ತನಿಖೆ ಕೈಗೊಂಡು ಮೃತ ಅರ್ಚಕ ಸಿದ್ದಲಿಂಗಪ್ಪ ತನ್ನ ಸ್ವಂತ ಅಕ್ಕನ ಮಗಳನ್ನೇ ಮದುವೆ ಮಾಡಿಕೊಂಡು ಎರಡು ಮಕ್ಕಳಿದ್ದು, ಅರ್ಚಕನ ಹೆಂಡತಿ ಶಾಲಿನಿ ಒಂದೇ ಊರಿನ ಟಿಪ್ಪರ್ ಡ್ರೈವರ್ ಹರೀಶ್‌ ಎಂ.ಸಿ ಎಂಬ ಅವಿವಾಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಬಂದಿದೆ.

ನಂತರ ಹರೀಶ್‌ ಮಾ.9 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಈತ ಶಾಲಿನಿ ಜೊತೆಗೆ ಒಂದು ದಿನ ಆರ್ಚಕನ ಮನೆಯಲ್ಲಿ ಇಬ್ಬರೂ ಆಕಸ್ಮಿಕವಾಗಿ ಸಿದ್ದಲಿಂಗಪ್ಪನ ಕೈಗೆ ಸಿಕ್ಕಿಕೊಂಡಾಗ ಅಂದಿನಿಂದ ಅರ್ಚಕ ತನ್ನ ಹೆಂಡತಿ ಮತ್ತು ಹರೀಶ್‌ನಿಗೆ ಹಿಂಸೆ ಕೊಡುತ್ತಿದ್ದನು.

ಇದರಿಂದ ಬೇಸತ್ತಿದ್ದ ಪತ್ನಿ ಶಾಲಿನಿ ತನ್ನ ಗಂಡನನ್ನು ಮುಗಿಸು ಎಂದು ಹರೀಶ್‌ನಿಗೆ ಹೇಳಿದ್ದು, ಮಾ.6 ರಂದು ಅರ್ಚಕ ಕೆಲಸಕ್ಕೆ ಹೋದ ಬಗ್ಗೆ ಮತ್ತು ವಾಪಸ್ಸು ಬರುವ ಸಮಯದ ಬಗ್ಗೆ ಪ್ರಿಯಕರನಿಗೆ ಶಾಲಿನಿ ಮೆಸೇಜ್ ಮಾಡಿದ್ದಾಳೆ. ಹರೀಶ್‌ನ ತನ್ನ ಸ್ನೇಹಿತ ಟಿಪ್ಪರ್ ಡ್ರೈವರ್ ಗಣೇಶ್‌ನಿಂದ ಕೊಲೆ ಮಾಡುವ ಸ್ಥಳದಿಂದ ಹಿಂದೆ 1 ಕಿ.ಮೀ ದೂರದಲ್ಲಿ ಅರ್ಚಕ ಊರಿಗೆ ಬೈಕ್‌ನಲ್ಲಿ ಒಬ್ಬನೇ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ನಂತರ ಹರೀಶ್‌ ಮತ್ತು ಟಿಪ್ಪರ್ ಡ್ರೈವರ್ ಸಂತೋಷ್ ಕುಮಾರ್ ಎಂ.ಆರ್. ಜೊತೆಯಾಗಿ ಗ್ರಾಮದ ಬಳಿಯ ಕಾಲುವೆ ಏರಿ ನಿರ್ಜನ ಸ್ಥಳದಲ್ಲಿ ಅರ್ಚಕ ಸಿದ್ದಲಿಂಗಪ್ಪನನ್ನು ಅಡ್ಡಗಟ್ಟಿ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿ ಈ ಕೊಲೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಅಪಘಾತವಾಗಿ ಬಿದ್ದಿರಬಹುದೆಂದು ಬಿಂಬಿಸಲು ಹೆಣವನ್ನು ಮತ್ತು ಬೈಕನ್ನು ನಾಲಾ ಏರಿಮೇಲಿನ ರಸ್ತೆಯಿಂದ ನಾಲಾ ನೀರಿಗೆ ತಳ್ಳಿ ಊರಿನಲ್ಲಿ ಅನುಮಾನ ಬರದಂತೆ ಮೃತನ ಶವ ಸಂಸ್ಕಾರದ ವೇಳೆ ಇದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಬಂಧಿತ ಆರೋಪಿ ಹರೀಶ್‌ ನನ್ನು ಶ್ರೀರಂಗಪಟ್ಟಣ ಎಸಿಜೆ ಮತ್ತು ಎಎಂಎಪ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆ ತಂಡವು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಕೊಲೆ ಮಾಡಿರುವ ಮತ್ತು ಕೊಲೆ ಬಗ್ಗೆ ತಪ್ಪನ್ನೊಪ್ಪಿಕೊಂಡಿರುವುದು ಕಂಡು ಬಂದಿದೆ.

ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಡಾ.ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್‌ಪಿ ಯು.ಡಿ. ಕೃಷ್ಣಕುಮಾರ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಆನಂದಕುಮಾರ್ ಎಚ್, ಸಿಪಿಐ ವಿವೇಕಾನಂದ, ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಪಾಂಡವಪುರ ಠಾಣೆ ಇನ್ಸ್‌ಪೆಕ್ಟರ್ ಶರತ್ ಎಚ್.ಪಿ, ಪಿಎಸ್‌ಐಗಳಾದ ರಕ್ಷಿತ ಜಿ.ಎಸ್, ವಿನೋದ್, ರಮೇಶ್ ಕರಕಿಕಟ್ಟೆ, ಸಿಬ್ಬಂದಿ ಲೋಕೇಶ್, ಹಫೀಜ್ ಪಾಷ, ಚಂದ್ರಶೇಖರ್, ಶ್ರೀಧರ್, ರವಿಕಿರಣ್ ಲೋಕೇಶ್, ಶಂಕರ್, ದಿನೇಶ್, ಮಂಜುನಾಥ, ಶರತ್, ಸಂತೋಷ್, ತೌಸಿಫ್ ತಂಡ ರಚನೆ ಮಾಡಲಾಗಿತ್ತು.