ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಣ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.ಗ್ರಾಮದ ರೋಹಿತ್ ಅವರ ಪತ್ನಿ ಪುಷ್ಪಲತ (23) ಹಾಗೂ ಎರಡು ವರ್ಷದ ಹೆಣ್ಣು ಮಗು ದಿಶಾನಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ನತದೃಷ್ಟ ತಾಯಿ ಮಗಳು. ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಲೂಕಿನ ತೆಂಗಿನಭಾಗ ಗ್ರಾಮದ ಭಾಗ್ಯಮ್ಮ ಮತ್ತು ಯೋಗೇಶ್ ದಂಪತಿ ಪುತ್ರಿ ಪುಷ್ಪಲತ ಅವರನ್ನು ಕಳೆದ ಮೂರು ವರ್ಷದ ಹಿಂದೆ ಚಿಣ್ಯ ಗ್ರಾಮದ ಸುನಂದ ಮತ್ತು ಮಹೇಶ್ ಪುತ್ರ ರೋಹಿತ್‌ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು.ಕೆಲ ದಿನಗಳಿಂದ ಸಣ್ಣ ಪುಟ್ಟ ವಿಚಾರಕ್ಕೆ ಸೊಸೆಯೊಂದಿಗೆ ಜಗಳವಾಡುತ್ತಿದ್ದ ಮನೆಯವರು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಒಂದೆರಡು ಬಾರಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿ ತಿಳಿ ಹೇಳಲಾಗಿತ್ತು. ಶನಿವಾರ ರಾತ್ರಿಯೂ ಕೂಡ ಕ್ಷುಲ್ಲಕ ಕಾರಣಕ್ಕೆ ನನ್ನ ಮಗಳೊಂದಿಗೆ ಜಗಳವಾಡಿ ಬೈದು ಹಲ್ಲೆ ನಡೆಸಿದ್ದಾರೆಂದು ಮೃತ ಪುಷ್ಪಲತ ತಾಯಿಯಿಂದ ಆರೋಪ ಕೇಳಿಬಂದಿದೆ.
ಭಾನುವಾರ ಬೆಳಗ್ಗೆ ಪುಷ್ಪಲತಾ ಮತ್ತು ಮಗು ದಿಶಾನಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸುತ್ತಿದ್ದ ವೇಳೆ ಗ್ರಾಮದೊಳಗಿರುವ ನೀರು ಸೇದುವ ಬಾವಿಯೊಂದರಲ್ಲಿ ಪುಷ್ಪಲತಾ ಮೃತದೇಹ ಪತ್ತೆಯಾಗಿದೆ. ನೀರಿನಲ್ಲಿದ್ದ ಮೃತದೇಹ ಹೊರತೆಯುವ ವೇಳೆ ಮಗುವಿನ ಮೃತದೇಹವೂ ಸಿಕ್ಕಿದೆ.ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿ ಬಂದ ಪುಷ್ಪಲತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಿಷಯ ತಿಳಿದ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟರಾದರೂ ಘಟನೆ ಬಗ್ಗೆ ಯಾವುದೇ ದೂರು ನೀಡುವುದಿಲ್ಲ. ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಂಡು ಮೃತದೇಹಗಳ ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದರೆಂದು ಹೇಳಲಾಗಿದೆ. ಹಾಗಾಗಿ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.