ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ಪುಡಿ ರೌಡಿಗಳ ಪುಂಡಾಟ ಮಿತಿ ಮೀರುತ್ತಿದೆ. ಅವರ ಪುಂಡಾಟಕ್ಕೆ ಕಡಿವಾಣವೇ ಬೀಳದಂತಾಗಿದೆ. ಟ್ರಕ್ ಚಾಲಕನ ಮೇಲೆ ಶೂಟೌಟ್, ಕಾರನ್ನು ಅಡ್ಡಗಟ್ಟಿ ಕುಟುಂಬದವರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಫ್ಲೈ ಬಸ್ಸೊಂದನ್ನು ಅಡ್ಡ ಹಾಕಿ ಚಾಲಕ-ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ನಡೆದಿರುವ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಬಸ್ ಚಾಲಕ ವಿನೋದ್, ನಿರ್ವಾಹಕ ಈರಣ್ಣ ಹಲ್ಲೆಗೊಳಗಾದವರು. ಪುಂಡರು ಗಲಾಟೆ ಮಾಡಿರುವ ವೀಡಿಯೋ ದೃಶ್ಯಾವಳಿಗಳು ಸೀಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಇಬ್ಬರನ್ನೂ ದಸ್ತಗಿರಿ ಮಾಡಿದ್ದಾರೆ.
ಬೆಂಗಳೂರು ಏರ್‌ಪೋರ್ಟ್‌ನಿಂದ ಮೈಸೂರಿಗೆ ತೆರಳುತ್ತಿದ್ದ ಫ್ಲೈ ಬಸ್ ಮಂಡ್ಯದಲ್ಲಿ ಪ್ರಯಾಣಿಕರನ್ನ ಇಳಿಸಿ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿತ್ತು. ಮಧ್ಯರಾತ್ರಿ ೨.೩೦ರ ಸಮಯದಲ್ಲಿ ಇಂಡುವಾಳು ಬಳಿ ಫ್ಲೈಬಸ್‌ನ್ನು ಅಡ್ಡಗಟ್ಟಿದ ಪುಂಡರು ಕುಡಿದ ನಶೆಯಲ್ಲಿ ಒನ್-ವೇಯಲ್ಲಿ ಬೈಕ್‌ನಲ್ಲಿ ಬಂದು ಬಸ್ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಗಲಾಟೆ ಮಾಡಿದರೆ ಪೊಲೀಸರಿಗೆ ತಿಳಿಸಬೇಕಾಗುತ್ತದೆ ಎಂದು ಹೇಳಿದಾಗ, ಮತ್ತೆ ಚಾಲಕ ಮತ್ತು ನಿರ್ವಾಹಕರನ್ನು ನಿಂದಿಸಿ ನಾವು ಮಂಡ್ಯ ಲೋಕಲ್ ಎಂದು ಹೇಳಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒನ್-ವೇನಲ್ಲಿ ಹೋಗುವಾಗ ಜಗಳ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹಲ್ಲೆ ನಡೆಸಿರುವ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.- ಡಾ.ವಿ.ಜೆ.ಶೋಭಾರಾಣಿ, ಎಸ್‌ಪಿ, ಮಂಡ್ಯಕಾರು ಚಾಲಕ, ಕುಟುಂಬದ ಮೇಲೆ ಹಲ್ಲೆದವರ ಬಂಧನಮದ್ದೂರು:ಬೆಂಗಳೂರು ಮೂಲದ ಕಾರು ಚಾಲಕ ಹಾಗೂ ಆತನ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕು ಮಾರಮ್ಮನಹಳ್ಳಿಯ ಸಂತೋಷ್ (36), ಚನ್ನಪಟ್ಟಣ ತಾಲೂಕು ಹೊಸಕೊಪ್ಪಲು ಗ್ರಾಮದ ಅರುಣ್ ಕುಮಾರ್ (23), ದಾವಣಗೆರೆ ನಗರದ ಕೊಕ್ಕರಗೊಳ್ಳ ಗ್ರಾಮದ ಡಿ.ಅಭಿಷೇಕ್ (27) ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರು ಹಾಗೂ ತಲೆಮರಸಿಕೊಂಡವರು ಬೆಂಗಳೂರಿನ ಬೇರೆ ಬೇರೆ ಸ್ಥಳಗಳಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳು ಬೆಂಗಳೂರಿನ ಅತ್ತಿಗುಪ್ಪೆ ಬಿಸಿಸಿ ಲೇಔಟ್ ನಿವಾಸಿ ಎಂ.ಸಾಗರ್ ಕುಮಾರ್ ಕುಟುಂಬದವರೊಂದಿಗೆ ಕಳೆದ ಭಾನುವಾರ ರಾತ್ರಿ ಮೈಸೂರಿನಿಂದ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮದ್ದೂರಿನ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರಮ್ಮ ದೇವಾಲಯದ ಬಳಿ ಸಾಗರ್ ಕಾರನ್ನು ಅಡಗಟ್ಟಿ ಆತ ಮತ್ತು ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.