ಅಕ್ರಮ ಸಂಬಂಧ ಹೊಂದಿದ್ದ ಬೆಂಗಳೂರಿನ ಮಹಿಳೆಯನ್ನು ತಮಿಳುನಾಡಿನ ಪ್ರಿಯಕರನೊಬ್ಬ ಕೊಲೆ ಮಾಡಿ ಸುಟ್ಟು ಹಾಕಿದ ನಂತರ ತಾನು ಕೂಡ ತನ್ನ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಮಳವಳ್ಳಿ ತಾಲೂಕಿನ ಬೆಳಕವಾಡಿ ಠಾಣೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಕ್ರಮ ಸಂಬಂಧ ಹೊಂದಿದ್ದ ಬೆಂಗಳೂರಿನ ಮಹಿಳೆಯನ್ನು ತಮಿಳುನಾಡಿನ ಪ್ರಿಯಕರನೊಬ್ಬ ಕೊಲೆ ಮಾಡಿ ಸುಟ್ಟು ಹಾಕಿದ ನಂತರ ತಾನು ಕೂಡ ತನ್ನ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ತಾಲೂಕಿನ ಬೆಳಕವಾಡಿ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಹಾರೋಹಳ್ಳಿಯ ಕಗ್ಗಲೀಪುರದ ನಳಿನಿ (33) ಕೊಲೆಯಾದ ಯುವತಿ. ಆಕೆಯ ಪ್ರಿಯಕರ ತಮಿಳಿನಾಡು ಮೂಲದ ಉಪ್ಪಾರಹಳ್ಳಿಯ ರಾಜಶೇಖರ್ (30) ಕೊಲೆ ಮಾಡಿ ಮಳವಳ್ಳಿ ತಾಲೂಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ ಕೆಲ ದಿನಗಳ ನಂತರ ಆತನೂ ಸಹ ತನ್ನ ತಾಯಿಯೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣದ ಹಿನ್ನೆಲೆ:ಕಳೆದ ಜೂನ್ 22 ರಂದು ತಾಲೂಕಿನ ರಾಷ್ಟ್ರೀಯ ಹೆದ್ದಾರಿ- 948ರ ಜವನಗಹಳ್ಳಿ ಗುಡ್ಡದ ಬಳಿ ನಿರ್ಜನ ಪ್ರದೇಶದಲ್ಲಿ ಸಂಪೂರ್ಣ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬರು ಶವವನ್ನು ಕಂಡು ಬೆಳಕವಾಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳದಲ್ಲಿ ಮಹಿಳೆಯ ಕೈಗಡಿಯಾರ, ಉಂಗುರ, ಹೇರ್ ಕ್ಲಿಪ್ ಮತ್ತು ಮನೆಯ ಕೀ ಪತ್ತೆಯಾಗಿತ್ತು. ಸಿಕ್ಕ ಮಾಹಿತಿಯೊಂದಿಗೆ ಬೆಳಕವಾಡಿ ಪಿಎಸ್ಐ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣ ಕುರಿತು ಬೇರೆ ಠಾಣೆಗಳಲ್ಲಿ ವಿಚಾರಣೆ ನಡೆಸಿದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಹಾಗೂ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐಗಳಾದ ಪ್ರಕಾಶ್, ಲೋಕೇಶ್, ಶೇಷಾದ್ರಿ, ರವಿಕುಮಾರ್ ಅವರ ವಿಶೇಷ ತಂಡ ರಚಿಸಲಾಗಿತ್ತು.
ನಂತರ ತಂಡ ತನಿಖೆ ಕೈಗೊಂಡು ಮಹಿಳೆಯ ಸುಟ್ಟು ಸ್ಥಳದಲ್ಲೇ ಸಿಕ್ಕ ವಸ್ತುಗಳ ನೆರವಿನಿಂದ ಅಪರಿಚಿತ ಮಹಿಳೆ ಬೆಂಗಳೂರಿನ ಜೆ.ಪಿ.ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ನಳಿನಿ ಎಂಬುದು ಗೊತ್ತಾಯಿತು. ಪ್ರಕರಣದ ತನಿಖೆಗೆ ಶವ ಪತ್ತೆಯಾದ ಸಮೀಪದ ಗಗನಚುಕ್ಕಿ ಟೋಲ್ ಸಿಸಿಟಿವಿಯ ಪೊಲೀಸರಿಗೆ ನೆರವಾಯಿತು.ಆ ಸಿಸಿ ಟಿವಿ ಪರಿಶೀಲಿಸಿದಾಗ ಪೊಲೀಸರಿಗೆ ಜೂ.24ರಂದು ಟೋಲ್ ಬಳಿ ಸಂಚರಿಸಿದ ಕಾರೊಂದರ ಮೇಲೆ ಅನುಮಾನ ಮೂಡಿತು. ಆ ಕಾರಿನ ಮುಂದಿನ ಸೀಟಿನಲ್ಲಿ ಮಹಿಳೆಯೊಬ್ಬರು ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ನಂತರ ಕಾರಿನ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅದು ರಾಜಶೇಖರ್‌ಗೆ ಸೇರಿದ್ದು ಎಂದು ಗೊತ್ತಾಗಿದೆ.
ಪೊಲೀಸರು ಆತನನ್ನು ವಿಚಾರಿಸಿದಾಗ ತಾನು ಕಾರನ್ನು ಮೊದಲೇ ಮಾರಾಟ ಮಾಡಿದ್ದೇನೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ನಳಿನಿ ಸ್ನೇಹಿತೆ ಶ್ರೇಯಾ ಕರೆ ಮಾಡಿದಾಗ ಜೂನ್ 24ರಂದು ನಳಿನಿ ರಾಜಶೇಖರ್ ಜೊತೆ ಹೋಗುತ್ತಿರುವುದಾಗಿ ಹೇಳಿದ್ದರು. ಹೀಗಾಗಿ ರಾಜಶೇಖರನ ಸ್ನೇಹಿತರ ವಿಚಾರಣೆ ನಡೆಸಿದಾಗ ಈ ಮೊದಲೇ ಮದುವೆಯಾಗಿ ಗಂಡನಿಂದ ದೂರವಿದ್ದ ನಳಿನಿ ಮತ್ತು ರಾಜಶೇಖರ್ ನಡುವೆ ಇದ್ದ ಅಕ್ರಮ ಸಂಬಂಧದ ವಿಚಾರ ತಿಳಿದಿದೆ.ನಳಿನಿಗೆ ದೇವಸ್ಥಾನವೊಂದರಲ್ಲಿ ರಾಜಶೇಖರ್ ಜೊತೆಗೆ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಬಳಿಕ ತನ್ನನ್ನು ಮದುವೆಯಾಗುವಂತೆ ನಳಿನಿ ರಾಜಶೇಖರನನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದಳು. ಮೊದಲೇ ಮದುವೆಯಾಗಿದ್ದ ನಳಿನಿಯನ್ನು ಮದುವೆಯಾಗಲು ರಾಜಶೇಖರನಿಗೆ ಇಷ್ಟವಿರಲಿಲ್ಲ. ಹೀಗಾಗಿ ಇಬ್ಬರ ಜೊತೆಗೆ ಗಲಾಟೆ ನಡೆದಿತ್ತು.
ನಳಿನಿ ನಡೆಯಿಂದ ಕೋಪಗೊಂಡಿದ್ದ ರಾಜಶೇಖರ್ ಜೂನ್ 24ರಂದು ಕಾರಿನಲ್ಲಿಯೇ ಕೊಲೆ ಮಾಡಿ ಶವವನ್ನು ಜವನಗಹಳ್ಳಿ ಗುಡ್ಡದಲ್ಲಿ ಹಾಕಿ ಸುಟ್ಟು ಹಾಕಿದ್ದನು. ಎರಡು ದಿನಗಳ ಬಳಿಕವೂ ಆರೋಪಿ ತನ್ನ ನಿಳಿಯ ಶವ ಸುಟ್ಟ ಸ್ಥಳವನ್ನು ನೋಡಿ ಹೋಗಿದ್ದನು.ಪೊಲೀಸರ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಬಂಧನದ ಭೀತಿಯಿಂದ ಕಳೆದ ಜೂನ್ 28ರ ಸಂಜೆ ನಳಿನಿ ಪ್ರಿಯಕರ ರಾಜಶೇಖರ್ ಕೂಡ ತನ್ನ ತಾಯಿಯೊಂದಿಗೆ ತಮಿಳುನಾಡಿನ ಉಪ್ಪಾರಹಳ್ಳಿಯ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಅಕ್ರಮ ಸಂಬಂಧಕ್ಕೆ ತಾಯಿ ಬಲಿಯಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ.ಮುಖ್ಯಾಂಶಗಳು
- ಜೂ.24ರಂದು ಮಳವಳ್ಳಿಯಲ್ಲಿ ಸುಟ್ಟು ಹಾಕಿದ ರೀತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ- ಈಗ ತಾಯಿಯೊಂದಿಗೆ ಆರೋಪಿಯೂ ಕಾಲುವೆಗೆ ಜಿಗಿದು ಆತ್ಮಹತ್ಯೆ
- ಮೃತಳಿಗೆ ಈಗಾಗಲೇ ಮದುವೆಯಾಗಿದ್ದು ಗಂಡನಿಂದ ದೂರ- ಮದುವೆ ಆಗುವಂತೆ ಪಿಡಿಸಿದಾಗ ಪ್ರಿಯಕರನಿಂದ ಹತ್ಯೆ
- ಕೊಲೆ ಪ್ರಕರಣ ಭೇದಿಸಿದ ಬೆಳಕವಾಡಿ ಠಾಣೆ ಪೊಲೀಸರು