ಕನ್ನಡಪ್ರಭ ವಾರ್ತೆ ಮದ್ದೂರು

ಓವರ್ ಟೇಕ್ ವಿಚಾರವಾಗಿ ಐದು ಮಂದಿ ಪುಂಡರ ಗುಂಪು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಅಲ್ಲೇ ನಡೆಸಿ ಕಾರನ್ನು ಜಖಂಗೊಳಿಸಿದ ಘಟನೆ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಯ ಮದ್ದೂರಮ್ಮ ದೇವಾಲಯದ ಬಳಿ ಭಾನುವಾರ ರಾತ್ರಿ ಜರುಗಿದೆ.

ಬೆಂಗಳೂರಿನ ಅತ್ತಿಗುಪ್ಪೆ ಬಿಸಿಸಿ ಲೇಔಟ್‌ನ ಎರಡನೇ ಕ್ರಾಸ್ 3ನೇ ಮೇನ್ ರಸ್ತೆಯ ನಿವಾಸಿ ಎಂ.ಸಾಗರ್ ಕುಮಾರ್ ಅವರ ಮೇಲೆ ಪುಂಡರ ಗುಂಪು ಕಾರಿನ ವ್ಹೀಲ್ ಜಾಕ್, ರಾಡಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಸಾಗರ್ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಅಲ್ಲದೇ, ತಂದೆಯ ರಕ್ಷಣೆಗೆ ಧಾವಿಸಿದ 8 ವರ್ಷದ ಮಗುವಿನ ಕೈಯನ್ನು ಪುಂಡರು ಕ್ರೂರವಾಗಿ ತಿರುಚಿ ಗಾಯಗೊಳಿಸಿದ್ದಾರೆ. ಇದೇ ವೇಳೆ ಗಂಡ ಸಾಗರ ಮೇಲೆ ನಡೆದ ಹಲ್ಲೆಯನ್ನು ತಡೆಯಲು ಬಂದ ಪತ್ನಿ ಧನ್ಯಶ್ರೀ, ಅತ್ತೆ ಲತಾ, ಅಜ್ಜಿ ಉಮಾವತಿ ಅವರುಗಳಿಗೂ ಪುಂಡರು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಮದ್ದೂರು ಪೊಲೀಸರು ಬೆಂಗಳೂರಿನ ಸಂತೋಷ್, ಅರುಣ್ ಕುಮಾರ್, ಅಭಿಷೇಕ್, ವೆಂಕಟೇಶ್ ಹಾಗೂ ಪ್ರತಾಪ್ ಎಂಬುವವರಗಳ ವಿರುದ್ಧ ಬಿಎನ್ ಎಸ್ ಕಾಯ್ದೆ 189, 324, 126, 352, 115,118,357 ಹಾಗೂ 190 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


ಆರೋಪಿಗಳ ಪೈಕಿ ಮೂವರನ್ನು ವಶಕ್ಕೆ ಪಡೆದುಕೊಂಡು ಪಟ್ಟಣದ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಎಸ್.ಆರ್.ನಂದಿನಿ ಅವರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಗಾಯಾಳು ಸಾಗರ್ ತಮ್ಮ ತಂಗಿ ರಕ್ಷಾ ಅವರ ನಾಮಕರಣಕ್ಕೆ ಬೆಂಗಳೂರಿನಿಂದ ಕುಟುಂಬದವರೊಂದಿಗೆ ಮೈಸೂರಿಗೆ ತೆರಳಿ ರಾತ್ರಿ ವಾಪಸ್ ಆಗುತ್ತಿದ್ದರು. ಪಾಂಡವಪುರದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಟೋಲ್ ಬಳಿ ಸಾಗರ್ ಚಲನೆ ಮಾಡುತ್ತಿದ್ದ ಕಾರು ಆರೋಪಿಗಳ ಕಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ನಂತರ ಸಾಗರ್ ಕಾರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಮದ್ದೂರು ಪಟ್ಟಣದ ಮದ್ದೂರಮ್ಮ ದೇವಾಲಯದ ಎಕ್ಸ್ ಪ್ರೆಸ್ ಹೈವೇ ಮೇಲೆ ಭಾನುವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಸಾಗರ್ ಕಾರನ್ನು ಅಡ್ಡ ಗಟ್ಟಿದ ದುಷ್ಕರ್ಮಿಗಳು ಸಾಗರ್ ಮತ್ತು ಕುಟುಂಬದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಈ ಪೈಕಿ ಓರ್ವ ಆರೋಪಿ ಸಾಗರ್ ತಲೆಗೆ ವಿಲ್ ರಾಡ್‌ನಿಂದ ಹೊಡೆದು ಗಾಯಗೊಳಿಸಿದ ಅಲ್ಲದೇ, ಅದೇ ರಾಡ್ ನಿಂದ ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಪೈಕಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.