ಬೆಂಗಳೂರು : ಬಹುಕೋಟಿ ಮೊತ್ತ ಬಿಟ್ ಕಾಯಿನ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಸೇರಿ ಮೂವರು ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು ಸೋಮವಾರ ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಸುಮಾರು 3,500 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ, ಕ್ರಿಪ್ಟೋಕರೆನ್ಸಿ ವ್ಯಾಪಾರಿ ರಾಬಿನ್ ಖಂಡೆವಾಲಾ, ಉದ್ಯಮಿ ಸುನೀಶ್ ಹೆಗ್ಡೆ ವಿರುದ್ಧ ಇ.ಡಿ.ಅಧಿಕಾರಿಗಳು ಈ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಆರೋಪಿಗಳ ಉನ್ನತ ಮಟ್ಟದ ಹ್ಯಾಕಿಂಗ್, ಡಾರ್ಕ್‌ನೆಟ್ ಕಾರ್ಯಾಚರಣೆಗಳು, ಸೈಬರ್ ಸುಲಿಗೆ, ಬಹುಕೋಟಿ ಕ್ರಿಪ್ಟೋಕರೆನ್ಸಿ ವರ್ಗಾವಣೆ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೆ ಈ ಅಪರಾಧದಲ್ಲಿ ಆರೋಪಿಗಳಿಗೆ ಸಾಥ್ ನೀಡಿದ ಖಾಸಗಿ ಕಂಪನಿ ಹಾಗೂ ಇಬ್ಬರು ವ್ಯಕ್ತಿಗಳ ಹೆಸರನ್ನೂ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.
ಸರ್ವರ್‌ಗಳ ದುರ್ಬಲತೆ ಬಳಸಿಕೊಂಡು ಹ್ಯಾಕ್:
ಪ್ರಮುಖ ಆರೋಪಿ ಶ್ರೀಕಿ ಈ ಹಗರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಕಾರ್ಪೊರೇಟ್ ಸರ್ವರ್‌ಗಳ ದುರ್ಬಲತೆ ಬಳಸಿಕೊಂಡು ಹ್ಯಾಕ್ ಮಾಡುತ್ತಿದ್ದ. ಈತನ ವಿರುದ್ಧ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.50 ಕೋಟಿ ರು. ಕಬಳಿಸಿದ ಆರೋಪವೂ ಇದೆ. ಯುನಿಕಾನ್ ಕ್ರಿಪ್ಟೋ ವಿನಿಮಯ ಮತ್ತು ಪ್ರಮುಖ ಪೋಕರ್ ಅಪ್ಲಿಕೇಶನ್‌ಗಳನ್ನು ಕೂಡ ಹ್ಯಾಕ್ ಮಾಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆನ್‌ಲೈನ್ ಸುಲಿಗೆಗೆ ಫ್ಲ್ಯಾನ್:
ಮತ್ತೊಬ್ಬ ಆರೋಪಿ ಸುನೀಶ್ ಹೆಗ್ಡೆ ರಾಜಕೀಯ ಸಂಪರ್ಕ ಹೊಂದಿರುವ ಜೂಜಿನ ಉದ್ಯಮಿ ಮತ್ತು ಗುತ್ತಿಗೆದಾರ. ಪ್ರಮುಖ ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನಕ್ಕೆ ಹಣಕಾಸು ನೆರವು ನೀಡಿದ್ದಾನೆ. ಈತ ಆನ್‌ಲೈನ್ ಪೋಕರ್ ಸೈಟ್‌ಗಳನ್ನು ಹ್ಯಾಕ್ ಮಾಡುವಂತೆ ಶ್ರೀಕಿಗೆ ಒತ್ತಾಯಿಸುತ್ತಿದ್ದ. ಆನ್‌ಲೈನ್ ಸುಲಿಗೆಗೆ ಯೋಜನೆ ರೂಪಿಸುತ್ತಿದ್ದ. ಆರೋಪಿಗಳು ಗೇಮಿಂಗ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿ ಬಳಿಕ 2 ಕೋಟಿ ರು. ನಗದು, ಕ್ಯಾಸಿನೋ ಚಿಪ್‌ಗಳು ಮತ್ತು ವರ್ಚುವಲ್ ಸ್ವತ್ತುಗಳಿಗೆ ಬೇಡಿಕೆ ಇರಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ವ್ಯವಸ್ಥಿತವಾಗಿ ಅಕ್ರಮ ಹಣ ವರ್ಗಾವಣೆ:
ಈ ಸುಲಿಗೆ ಗ್ಯಾಂಗಿನ ಮತ್ತೊಬ್ಬ ಆರೋಪಿ ರಾಬಿನ್ ಖಂಡೇವಾಲಾ ಕ್ರಿಪ್ಟೋ ಕರೆನ್ಸಿ ವ್ಯಾಪಾರಿ. ಶ್ರೀಕಿ ಮತ್ತು ಸುನೀಶ್ ಹೆಗ್ಡೆ ಹ್ಯಾಕ್ ಮಾಡಿ ಕದ್ದ ವರ್ಚುವಲ್ ಸ್ವತ್ತುಗಳನ್ನು ಅಂತಾರಾಷ್ಟ್ರೀಯ ಕ್ರಿಪ್ಟೋ ಪ್ಲಾರ್ಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಹಣವಾಗಿ ಪರಿವರ್ತಿಸುತ್ತಿದ್ದ. ಬಳಿಕ ಆ ಹಣವನ್ನು ಅಕ್ರಮವಾಗಿ ಶ್ರೀಕಿ ಮತ್ತು ಆತನ ಆಪ್ತ ವಲಯ ನಿಯಂತ್ರಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ವ್ಯವಸ್ಥಿತವಾಗಿ ವರ್ಗಾಯಿಸುತ್ತಿದ್ದ ಎಂದು ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಪೊಲೀಸರು 2020ರಲ್ಲಿ ಡಾರ್ಕ್ ವೆಬ್ ಮೂಲಕ ಮಾದಕವಸ್ತು ಖರೀದಿಸಿದ ಆರೋಪದಡಿ ಶ್ರೀಕಿಯನ್ನು ಮೊದಲ ಬಾರಿಗೆ ಬಂಧಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಕ್ರಿಪ್ಟೋ ಕರೆನ್ಸಿ ಹಗರಣ ಬೆಳಕಿಗೆ ಬಂದಿತ್ತು. ಮುಂದುವರೆದ ತನಿಖೆಯಲ್ಲಿ ಈ ಶ್ರೀಕಿ ಸಹಚರರು 2017ರಲ್ಲಿ ಯುನೋ ಕಾಯಿನ್ ಕ್ರಿಪ್ಟೋ ವಿನಿಮಯ ಕೇಂದ್ರ ಹ್ಯಾಕ್ ಮಾಡಿ 60ಕ್ಕೂ ಹೆಚ್ಚು ಬಿಟ್ ಕಾಯಿನ್ ಕಳವು, 2018ರಲ್ಲಿ ಆನ್‌ಲೈನ್ ಪೋಕರ್ ಅಪ್ಲಿಕೇಶನ್‌ಗಳು ಮತ್ತು ಕರ್ನಾಟಕ ಇ-ಪ್ರೊಕ್ಯೂರ್‌ಮೇಂಟ್ ಪೋರ್ಟಲ್ ಅನ್ನು ವ್ಯವಸ್ಥಿತವಾಗಿ ಹ್ಯಾಕ್ ಮಾಡಿ 11.50 ಕೋಟಿ ರು. ಕಳವು ಪ್ರಕರಣಗಳು ಬಯಲಾಗಿತ್ತು. ಈ ಬಿಟ್‌ಕಾಯಿನ್ ಹಗರಣ ಸಂಬಂಧ ತನಿಖೆಗೆ ಎಸ್ಐಟಿ ರಚಿಸಲಾಗಿತ್ತು. ಎಸ್ಐಟಿ ತನಿಖೆಯಲ್ಲಿ ಶ್ರೀಕಿ ಮತ್ತು ಆತನ ಸಹಚರರ ವಂಚನೆ ಜಾಲ ಬಿಚ್ಚಿಕೊಂಡಿತ್ತು.
12 ಕಡೆ ದಾಳಿ ಮಾಡಿದ್ದ ಇ.ಡಿ:
ಈ ನಡುವೆ ಬಹುಕೋಟಿ ಮೊತ್ತದ ಬಿಟ್ ಕಾಯಿನ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ ಏ.20ರಂದು ಇ.ಡಿ.ಅಧಿಕಾರಿಗಳು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಪುತ್ರರಾದ ಮೊಹಮ್ಮದ್ ನಲಪಾಡ್, ಒಮರ್ ನಲಪಾಡ್, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಅಕೀಬ್ ಖಾನ್ ನಿವಾಸಗಳು, ಶ್ರೀಕಿ ನಿವಾಸ ಸೇರಿ 12 ಕಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಮೊಬೈಲ್‌ಗಳು ಸೇರಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.
ಮೇ 8ರಂದು ಮೂವರ ಬಂಧನ:
ಬಳಿಕ ಇ.ಡಿ.ಅಧಿಕಾರಿಗಳು ಮೇ 8ರಂದು ಕುಖ್ಯಾತ ಹ್ಯಾಕರ್ ಶ್ರೀಕಿ, ಆತನ ಸಹಚರರಾದ ರಾಬಿನ್ ಖಂಡೇವಾಲಾ ಮತ್ತು ಸುನೀಶ್ ಹೆಗ್ಡೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಈ ಮೂವರು ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಲ್ಲಿದ್ದಾರೆ.
