ಬಿಟ್ಕಾಯಿನ್‌ ಕೇಸ್‌: ಎಸ್‌ಐಟಿಯಿಂದಐಪಿಎಸ್‌ ಅಧಿಕಾರಿ ಪುತ್ರ ವಿಚಾರಣೆ

| Published : May 14 2024, 01:00 AM IST

ಸಾರಾಂಶ

ಬಹುಕೋಟಿ ಬಿಟ್‌ ಕಾಯಿನ್ ಹಗರಣ ಸಂಬಂಧ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಸೋಮವಾರ ವಿಚಾರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹುಕೋಟಿ ಬಿಟ್‌ ಕಾಯಿನ್ ಹಗರಣ ಸಂಬಂಧ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಪುತ್ರನನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಸೋಮವಾರ ವಿಚಾರಣೆ ನಡೆಸಿದೆ.

ಅಂ.ರಾ.ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಅಧಿಕಾರಿ ಪುತ್ರನಿಗೆ ಎಸ್‌ಐಟಿ ತನಿಖೆ ಬಿಸಿ ತಟ್ಟಿದೆ.

ನೋಟಿಸ್‌ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿ ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ಮುಂದೆ ಐಪಿಎಸ್ ಅಧಿಕಾರಿ ಪುತ್ರ ಹಾಜರಾಗಿದ್ದಾನೆ. ಬಳಿಕ ಸುಮಾರು ನಾಲ್ಕು ತಾಸು ತೀವ್ರ ವಿಚಾರಣೆಗೊಳಪಡಿಸಿ ಆತನಿಂದ ಹೇಳಿಕೆ ದಾಖಲಿಸಿಕೊಂಡು ಅಗತ್ಯ ಬಿದ್ದರೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

49 ಲಕ್ಷದ ಐಷಾರಾಮಿ ಕಾರು ಖರೀದಿ?:

ಹಲವು ವರ್ಷಗಳಿಂದ ಹ್ಯಾಕರ್ ಶ್ರೀಕಿ ಜತೆ ಐಪಿಎಸ್ ಅಧಿಕಾರಿ ಪುತ್ರನಿಗೆ ಸ್ನೇಹವಿತ್ತು. ಹೀಗಿರುವಾಗ ಬಿಟ್ ಕಾಯಿನ್‌ ಬಳಸಿಕೊಂಡು 49 ಲಕ್ಷ ರು. ಕಾರನ್ನು ಶ್ರೀಕಿ ಖರೀದಿ ಮಾಡಿದ್ದ. ಆದರೆ ಆ ಕಾರು ಐಪಿಎಸ್ ಅಧಿಕಾರಿ ಪುತ್ರನ ಹೆಸರಿನಲ್ಲಿ ನೋಂದಣಿಯಾಗಿತ್ತು. ಇತ್ತೀಚೆಗೆ ಬಿಟ್‌ ಕಾಯಿನ್ ಹಗರಣದಲ್ಲಿ ಶ್ರೀಕಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಾರು ಖರೀದಿ ಸಂಗತಿ ಪತ್ತೆಯಾಗಿದೆ. ಹೀಗಾಗಿ ಐಪಿಎಸ್ ಅಧಿಕಾರಿ ಪುತ್ರನನ್ನು ವಿಚಾರಣೆಗೊಳ‍ಪಡಿಸಿ ಹೇಳಿಕೆ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಶ್ರೀಕಿ ಜತೆ ಹಣಕಾಸು ವ್ಯವಹಾರದ ಬಗ್ಗೆ ಪುರಾವೆ ಪತ್ತೆಯಾದರೆ ಆತನ ಮೇಲೆ ಕ್ರಮ ಜರುಗಿಸಲಾಗುತ್ತದೆ. ಇದುವರೆಗೆ ದೊಡ್ಡ ಮಟ್ಟದ ಹಣಕಾಸು ವಹಿವಾಟು ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.