11 ತಿಂಗಳ ಹೆಣ್ಣು ಮಗು ಕೊಲೆ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮಗುವಿನ ತಂದೆಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಿಯೇ ಮಗುವನ್ನು ಕಾಲಿನಿಂದ ಒದ್ದಿದ್ದು, ಬಳಿಕ ತಂದೆ ಮಗುವನ್ನು ಶೆಡ್‌ನಿಂದ ಎಸೆದು ಕೊಲೆ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಬೆಂಗಳೂರು : 11 ತಿಂಗಳ ಹೆಣ್ಣು ಮಗು ಕೊಲೆ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮಗುವಿನ ತಂದೆಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಿಯೇ ಮಗುವನ್ನು ಕಾಲಿನಿಂದ ಒದ್ದಿದ್ದು, ಬಳಿಕ ತಂದೆ ಮಗುವನ್ನು ಶೆಡ್‌ನಿಂದ ಎಸೆದು ಕೊಲೆ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಯಾದಗರಿ ಮೂಲದ ಶೇಖಪ್ಪ (22) ಬಂಧಿತ. ಈತನ ಪತ್ನಿ ವಿಜಯಲಕ್ಷ್ಮೀ ಪರಾರಿಯಾಗಿದ್ದು, ಆಕೆಗಾಗಿ ಶೋಧ ನಡೆಸಲಾಗಿದೆ. ಜೂ.9ರಂದು ಕಿತಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿತ್ತು. ಆರೋಪಿಗಳಾದ ಶೇಖಪ್ಪ ಮತ್ತು ವಿಜಯಲಕ್ಷ್ಮೀ ತಮ್ಮ ಮಗುವನ್ನು ಕೊಂದು. ನಂತರ ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ನಾಟಕವಾಡಿದ್ದರು. ಆರಂಭದಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಆರೋಪಿಗಳ ಕಳ್ಳಾಟ ಬಯಲಾಗಿದ್ದು, ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ತಂದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಯಾದಗಿರಿ ಮೂಲದ ಶೇಖಪ್ಪ ಮತ್ತು ವಿಜಯಲಕ್ಷ್ಮೀ 4 ವರ್ಷದ ಹಿಂದೆ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ 2ನೇ ಮಗು ರೇಣುಕಾಳನ್ನು ಜೂ.9 ರಂದು ದಂಪತಿ ಮಧ್ಯೆ ನಡೆದ ಜಗಳದಲ್ಲಿ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಮಗುವನ್ನು ದಂಪತಿಯೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು.
ಈ ಸಂಬಂಧ ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಾಥಮಿಕ ವಿಚಾರಣೆ ನಡೆಸಿದ್ದಾಗ ಮಗುವಿಗೆ ಹಾಲುಣಿಸುವಾಗ ಪತ್ನಿ ನಿದ್ರೆಗೆ ಜಾರಿದ್ದಳು. ಈ ವೇಳೆ ಮಗು ಮಂಚದಿಂದ ಬಿದ್ದು ಸಾವನ್ನಪ್ಪಿದೆ ಎಂದು ಶೇಖಪ್ಪ ಹೇಳಿಕೆ ನೀಡಿದ್ದ.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲು:
ಈ ಮಧ್ಯೆ ಜೂ.22ರಂದು ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ವ್ಯತಿರಿಕ್ತ ವರದಿ ಬಂದಿತ್ತು. ಮಗುವಿನ ದೇಹದಲ್ಲಿ ರಕ್ತಸ್ರಾವ ಮತ್ತು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ. ಅಲ್ಲದೆ, ಮಗುವಿನ ಖಾಸಗಿ ಭಾಗ ಸೇರಿದ ದೇಹದ ಕೆಲ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ಜತೆಗೆ ದೇಹದ ಒಳಭಾಗದಲ್ಲಿ ಅನೇಕ ಅಂಗಗಳು ಹಾನಿಯಾಗಿವೆ ಜತೆಗೆ ಮೂಳೆಗಳು ಮುರಿದಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪಿಎಸ್ಐ ಸುನೀಲ್ ಕುಮಾರ್, ಕೃತ್ಯ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡಿದ್ದಾಗ 2 ಅಡಿ ಇರುವ ಮಂಚದಿಂದ ಮಗು ಬಿದ್ದರೆ ಆಗುವಂತಹ ಗಾಯ ಇದಾಗಿಲ್ಲ ಎಂದ ಖಚಿತ ಪಡಿಸಿಕೊಂಡಿದ್ದರು. ಬಳಿಕ ಇಬ್ಬರು ಸಾಕ್ಷಿದಾರರನ್ನು ವಿಚಾರಣೆ ನಡೆಸಿದಾಗ ಆರೋಪಿತೆ ವಿಜಯಲಕ್ಷ್ಮೀ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜತೆಗೆ ದಂಪತಿಗೆ ಈ ಮಗುವಿನ ಮೇಲೆ ಪ್ರೀತಿ ಇರಲಿಲ್ಲ ಎಂದು ಹೇಳಲಾಗಿದೆ.
ಮಗುವನ್ನು ಒದ್ದ ಅಮ್ಮ-ಶೆಡ್‌ನಿಂದ ಎಸೆದ ಅಪ್ಪ:
ಜೂ.9ರಂದು ಮಧ್ಯಾಹ್ನ ಊಟಕ್ಕೆ ಬಂದ ಶೇಖಪ್ಪ, ಊಟ ಬಡಿಸುವ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಗಿದೆ. ಈ ವೇಳೆ ಮಗು ಆಳುತಿರುವುದು ನೋಡಿ ಇದೊಂದು ದರಿದ್ರ ಮಗುವಾಗಿದ್ದು, ಯಾವಾಗಲು ನನ್ನ ಹಿಂದೆಯೇ ಇರುತ್ತೆ ಎಂದು ಹೇಳಿ ಮಗುವಿಗೆ ಕಾಲಿನಿಂದ ವಿಜಯಲಕ್ಷ್ಮೀ ಒದ್ದಿದ್ದಳು. ಜಗಳ ವಿಕೋಪಕ್ಕೆ ಹೋದಾಗ ಅಡ್ಡ ಬಂದಿದ್ದ ಮಗುವನ್ನ ಶೇಖಪ್ಪ ಮಗುವನ್ನು ಶೆಡ್‌ನಿಂದ ಹೊರಗೆ ಬಿಸಾಕಿದ್ದಾನೆ. ಸ್ವಲ್ವ ಸಮಯ ಬಳಿಕ ಇಬ್ಬರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮಂಚದಿಂದ ಬಿದ್ದು, ಮಗು ಮೃತಪಟ್ಟಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ:
ತಲೆಮರೆಸಿಕೊಂಡಿರುವ ವಿಜಯಲಕ್ಷ್ಮೀ ಅಜ್ಞಾತಸ್ಥಳದಿಂದ ವಿಡಿಯೋ ಮಾಡಿ ಹರಿಬಿಟ್ಟಿದ್ದು, ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಯಿಸಿಕೊಂಡು ಪತಿ-ಮೈದುನ ಹಾಗೂ ತನ್ನ ಮೇಲೆ ಚಿತ್ರಹಿಂಸೆ ನೀಡಿದ್ದಾರೆ. ಮಗುವನ್ನು ನೀವೇ ಹತ್ಯೆ ಮಾಡಿದ್ದೀರಾ ಎಂದು ಒಪ್ಪಿಕೊಳ್ಳಿ ಎಂದು ಹೇಳಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಪತಿ ಮತ್ತು ಮೈದುನ ಬಟ್ಟೆ ಬಿಚ್ಚಿ ಖಾರದ ಪುಡಿ ಹಚ್ಚಿ ಹಲ್ಲೆ ನಡೆಸಿದ್ದಾರೆ. ಇನ್ನು ನ್ಯಾಯಾಂಗ ಬಂಧನದಲ್ಲಿರುವ ನಿನ್ನ ಪತಿ ಹೊರಬಂದ ಬಳಿಕ ನಿಮಗೆ 5 ಲಕ್ಷ ರು. ನೀಡುತ್ತೇವೆ. ಚಿತ್ರಹಿಂಸೆ ನೀಡಿರುವ ಬಗ್ಗೆ ಯಾರಿಗೂ ಹೇಳಬೇಡಿ. ಒಂದು ವೇಳೆ ಹೇಳಿದರೆ ತನ್ನನ್ನು ಬಂಧಿಸುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ವಿಡಿಯೋದಲ್ಲಿ ಪೊಲೀಸರ ವಿರುದ್ಧವೇ ವಿಜಯಲಕ್ಷ್ಮೀ ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

