ಗದಗ: ನಗರದಲ್ಲಿ ವ್ಯಕ್ತಿಯೊಬ್ಬ ಬುಧವಾರ ತನ್ನ ಪುಟ್ಟ ಮಗನನ್ನು ಬೈಕ್‌ನ ಸೈಡ್ ಬ್ಯಾಗ್ (ಲಗೇಜ್ ಬಾಕ್ಸ್) ಒಳಗೆ ಕೂರಿಸಿಕೊಂಡು ಸಂಚರಿಸಿ ಬೇಜವಾಬ್ದಾರಿ ಮೆರೆದಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ವ್ಯಾಪಕ ಆಕ್ರೋಶ, ಟೀಕೆ, ಚರ್ಚೆಗೆ ಕಾರಣವಾಗಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ವಿಚಿತ್ರ ದೃಶ್ಯವನ್ನು ಗಮನಿಸಿದ ಪೊಲೀಸರು ತಕ್ಷಣವೇ ಬೈಕ್ ಬೆನ್ನಟ್ಟಿದ್ದಾರೆ. ಕೆಲ ದೂರದವರೆಗೆ ಹಿಂಬಾಲಿಸಿ ಬೈಕ್ ತಡೆದು ನಿಲ್ಲಿಸಿದ ಪೊಲೀಸರು, ಮಗುವನ್ನು ಸೈಡ್ ಬ್ಯಾಗ್‌ನಲ್ಲಿ ಕೂಡ್ರಿಸಿಕೊಂಡು ಹೋಗಿದ್ದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ.ಒಂದು ವೇಳೆ ಬೈಕ್ ಜಾರಿ ಬಿದ್ದಿದ್ದರೆ ಮಗುವಿನ ಸ್ಥಿತಿ ಏನಾಗುತ್ತಿತ್ತು? ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿ ವಾಹನ ಸವಾರನಿಗೆ ಪೊಲೀಸರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆ ದಂಡ ವಿಧಿಸಿ, ಇಂತಹ ಅಪಾಯಕಾರಿ ಸಾಹಸಗಳನ್ನು ಮತ್ತೆ ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ವೈರಲ್: ಘಟನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ವರ್ಷದ ಬೆಸ್ಟ್ ಅಪ್ಪ ಅಂತ ಕರೆಯಬೇಕೋ ಅಥವಾ ಅತ್ಯಂತ ನಿರ್ಲಕ್ಷ್ಯದ ಅಪ್ಪ ಅಂತ ಕರೆಯಬೇಕೋ ಗೊತ್ತಾಗುತ್ತಿಲ್ಲ ಎಂದು ಕೆಲವರು ವ್ಯಂಗ್ಯವಾಡಿದರೆ, ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಇಂತಹ ನಿರ್ಲಕ್ಷ್ಯ ಕ್ಷಮಾರ್ಹವಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜವಾಬ್ದಾರಿ ಅರಿತು ನಡೆಯಿರಿ: ರಸ್ತೆ ಸುರಕ್ಷತೆ ಕೇವಲ ದಂಡದಿಂದ ಬರುವುದಿಲ್ಲ, ಜವಾಬ್ದಾರಿಯಿಂದ ಬರಬೇಕು. ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ಕ್ಷಣಿಕ ನಿರ್ಲಕ್ಷ್ಯ ಜೀವಿತಾವಧಿಯ ನೋವಿಗೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಬುಧವಾರ ಗದಗದಲ್ಲಿ ಕಂಡುಬಂದ ಈ ಶತಮಾನದ ಗ್ರೇಟ್ ಅಪ್ಪನ ಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
