ಮಾನವೀಯ ಮೌಲ್ಯ, ಸಂಸ್ಕಾರ ಬೆಳೆಸುವುದೇ ಶಿಕ್ಷಕನ ಕರ್ತವ್ಯ

KannadaprabhaNewsNetwork |  
Published : Sep 06, 2024, 01:01 AM IST
14 | Kannada Prabha

ಸಾರಾಂಶ

ಶಿಕ್ಷಕರು ಮೌಲ್ಯದ ಕಣಜ ಆಗಿರಬೇಕು. ಮಕ್ಕಳು ಮಾಡಿ ಕಲಿಯುವುದಕ್ಕಿಂತ, ನೋಡಿ ಕಲಿಯುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಮತ್ತು ಸಂಸ್ಕಾರವನ್ನು ಬೆಳೆಸುವುದೇ ನಿಜವಾದ ಶಿಕ್ಷಕನ ಕರ್ತವ್ಯ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಯಜ್ಞಮೂರ್ತಿ ಶ್ರೀಕಾಂತ್ ತಿಳಿಸಿದರು.

ನಗರದ ಶ್ರೀ ನಟರಾಜ ಸಭಾಂಗಣದಲ್ಲಿ ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಾದವರು ಮಕ್ಕಳಿಗೆ ಹೆಚ್ಚು ಚಟುವಟಿಕೆಯ ಮೂಲಕ ವಿಚಾರಗಳನ್ನು ಕಲಿಸಬೇಕು. ಇಲ್ಲದಿದ್ದರೆ ಅವರಲ್ಲಿ ಕಲಿಕೆಯ ಆಸಕ್ತಿ ಕುಗ್ಗುತ್ತದೆ. ಕೃತಕ ರೀತಿಯಲ್ಲಿ ಬೋಧನೆ ಮಾಡುವಂತಿರಬಾರದು. ನೈಜವಾಗಿ ಕಲಿಕೆ ಸಾಗಬೇಕು. ಆಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು.

ಶಿಕ್ಷಕರು ಮೌಲ್ಯದ ಕಣಜ ಆಗಿರಬೇಕು. ಮಕ್ಕಳು ಮಾಡಿ ಕಲಿಯುವುದಕ್ಕಿಂತ, ನೋಡಿ ಕಲಿಯುತ್ತಾರೆ. ಒಳ್ಳೆಯ ಮೌಲ್ಯ ಇರುವ ಶಿಕ್ಷಕರಿಗೆ ಯಾವತ್ತಿಗೂ ಅವರ ಮೇಲಿರುವ ಗೌರವ ಕಡಿಮೆ ಆಗುವುದಿಲ್ಲ. ಮೌಲ್ಯವನ್ನು ಬೆಳೆಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಮಾನವೀಯ ಮೌಲ್ಯಗಳು ಯಾರಲ್ಲಿ ಅಡಕವಾಗಿರುತ್ತದೆಯೋ, ಅವರು ಉತ್ತಮ ಶಿಕ್ಷಕರಾಗುತ್ತಾರೆ. ಯಾರಲ್ಲಿ ಮಾನವೀಯ ಮೌಲ್ಯಗಳು ಇರುವುದಿಲ್ಲವೋ ಅವರು ಶಿಕ್ಷಕರಾಗಲಾರರು ಎಂದರು.

ಇದೇ ವೇಳೆ ಆದರ್ಶ ಶಿಕ್ಷಕ ಸನ್ಮಾನ ಸ್ವೀಕರಿಸಿದ ಚಿದರಹಳ್ಳಿಯ ಶ್ರೀ ಗೌರಿಶಂಕರ ಪ್ರೌಢಶಾಲೆಯ ಸಹ ಶಿಕ್ಷಕ ಕುಮಾರ ರಾಘವನ್ ಮಾತನಾಡಿ, ಶಿಕ್ಷಣವೆಂದರೆ ಒಂದು ಜ್ಞಾನ, ಶಿಕ್ಷಣ ನಮ್ಮನ್ನು ಕಾಯುತ್ತದೆ. ಹಣ ನಮ್ಮನ್ನು ಕಾಯುವುದಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.

ಶಿಕ್ಷಣ ಎಂದರೆ ಜ್ಞಾನ, ಜ್ಞಾನದ ಸಂಪಾದನೆಯನ್ನು ಮಾಡಬೇಕು, ಹಣದ ಸಂಪಾದನೆಯಲ್ಲ. ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಬೇಕು, ಮೌಲ್ಯಗಳನ್ನು ಕಲಿಸಬೇಕು, ಸಂಸ್ಕಾರವಂತರನ್ನಾಗಿ ಮಾಡಬೇಕು. ಅದು ಶಿಕ್ಷಕರ ನಿಜವಾದ ಕರ್ತವ್ಯ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಶಿಕ್ಷಕರು ನಡೆದಾಡುವ ಗ್ರಂಥಾಲಯದಂತಿರಬೇಕು. ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲೂ ಮಾರ್ಗದರ್ಶನ ನೀಡಬೇಕು. ಅಂತಹ ಶಿಕ್ಷಕರಾಗಬೇಕು ಎಂದು ಹೇಳಿದರು.

ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ಎಲ್ಲಾ ಶಿಕ್ಷಕರು, ಬೋಧಕೇತರ ವರ್ಗದವರು ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ಡಾ. ಮಹೇಶ್ ದಳಪತಿ ಸ್ವಾಗತಿಸಿದರು. ಡಾ.ಎಂ. ಶೋಭಾ ವಂದಿಸಿದರು, ಸಿ.ಎನ್. ಸಂತೋಷ ಪಟೇಲ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ