‘ಸಮಸ್ಯೆ ತಿಳಿಸಿ, ಕೆಲಸ ಮಾಡಿಸೋ ಹೊಣೆ ನನ್ನದು’

KannadaprabhaNewsNetwork | Published : Jan 31, 2024 2:17 AM

ಸಾರಾಂಶ

ಅಧಿಕಾರಿಗಳಿಗೆ ನಾವು ಚುನಾವಣೆಯಲ್ಲಿ ಆಯ್ಕೆಯಾದ ನಗರಸಭೆ ಸದಸ್ಯರು ಎಂಬ ಕನಿಷ್ಠ ಗೌರವವಿಲ್ಲ, ಸರಿಯಾದ ಮಾಹಿತಿ ಕೊಡಲ್ಲ, ದಲ್ಲಾಳಿಗಳಿಗೆ ಇರುವ ಗೌರವ ನಮಗಿಲ್ಲ ವಿನಾಕಾರಣ ಸದಸ್ಯರ ಬಗ್ಗೆ ಆರೋಪಗಳನ್ನು ಮಾಡತ್ತಾರೆ ಎಂಬುದು ಸದಸ್ಯರ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರ

ನಗರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಹಾಗೂ ಕಾಮಗಾರಿ ಬಗ್ಗೆ ಮಾಹಿತಿ ಕೊಡಿ ನಗರಸಭೆ ಕಮಿಷನರ್ ಕೈಯಲ್ಲಿ ಕೆಲಸ ಮಾಡಿಸುವ ಜವಾಬ್ದಾರಿ ನಮಗೆ ಬಿಡಿ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ನಗರಸಭೆ ಸದಸ್ಯರಿಗೆ ಹೇಳಿದರು.

ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಸಭೆಗೆ ಸಂಬಂಧಿಸಿದ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಅನುದಾನವು ಬಿಡುಗಡೆ ಮಾಡಿದೆ. ಇನ್ನೂ ಬೇಕಾದರೂ ಹಣ ಕೊಡಲು ಸಿದ್ದವಿದೆ. ನಿಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಯಾವ ಕೆಲಸಗಳು ಆಗಬೇಕು, ಎಲ್ಲಿ ಆಗಬೇಕು ಎಂಬುದನ್ನು ಪಟ್ಟಿ ಮಾಡಿ ಕೊಟ್ಟರೆ, ಕೂಡಲೇ ಕೆಲಸ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.ನೀರಿನ ಸಮಸ್ಯೆ ಆಗಬಾರದು

ನಗರಸಭೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಬೇಕು, ಜಿಲ್ಲಾಧಿಕಾರಿ ಟಾಸ್ಕ್ ಫೋರ್ಸ್‌ನಲ್ಲಿ ಅನುದಾನ ಇದೆ, ನಗರಸಭೆ ಜನರ ಆಸ್ತಿಯಾಗಿದೆ, ಜನ ದಿನನಿತ್ಯ ನಗರಸಭೆಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬರುತ್ತಾರೆ ಅವರಿಗೆ ಪರಿಹಾರ ನೀಡುವುದು ಕೂಡ ಅಧಿಕಾರಿಗಳ ಜವಾಬ್ದಾರಿ ನಗರಸಭೆಯಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಒಂದೊಂದಾಗಿ ಪರಿಹಾರಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದಲ್ಲಾಳಿಗಳಿಗೇ ಹೆಚ್ಚು ಗೌರವ

ನಗರಸಭೆ ಸದಸ್ಯರು ಮಾತನಾಡಿ ಅಧಿಕಾರಿಗಳಿಗೆ ನಾವು ಚುನಾವಣೆಯಲ್ಲಿ ಆಯ್ಕೆಯಾದ ನಗರಸಭೆ ಸದಸ್ಯರು ಎಂಬ ಕನಿಷ್ಠ ಗೌರವವಿಲ್ಲ, ಸರಿಯಾದ ಮಾಹಿತಿ ಕೊಡಲ್ಲ, ದಲ್ಲಾಳಿಗಳಿಗೆ ಇರುವ ಗೌರವ ನಮಗಿಲ್ಲ ವಿನಾಕಾರಣ ಸದಸ್ಯರ ಬಗ್ಗೆ ಆರೋಪಗಳನ್ನು ಮಾಡತ್ತಾರೆ, ಇವತ್ತು ೩೫ ಜನ ನಗರಸಭೆ ಸದಸ್ಯರು ಇದ್ದಾರೆ, ನೇರವಾಗಿ ಹೇಳಲಿ ಸದಸ್ಯರ ಮೇಲೆ ಗೂಬೆ ಕೂರಿಸುತ್ತಾರೆ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು, ನಗರಸಭೆ ಸದಸ್ಯರು ಸಮಸ್ಯೆ ಬಗ್ಗೆ ಹೇಳಿದಾಗ ಸ್ಪಂದಿಸುವುದು ಅಧಿಕಾರಿ ವರ್ಗದವರ ಜವಾಬ್ದಾರಿ. ಹಿಂದೆ ಏನು ಆಗಿದೆ ಅದನ್ನು ಬಿಟ್ಟು ಬಿಡೋಣ, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸೋಣ ಎಂದರು.

ನಗರಸಭೆ ಪಾಲಿಕೆಯಾಗಲಿದೆ

ನಗರಸಭೆ ಮಂದೆ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ಕಾರ್ಯ ಯೋಜನೆ ರೂಪಿಸಲಾಗುತ್ತಾ ಇದೆ ನೂತನ ಕಟ್ಟಡವನ್ನು ಪಾಲಿಕೆಗೆ ಪೂರಕವಾಗಿ ಆದಷ್ಟು ಬೇಗ ನಿರ್ಮಿಸಲಾಗುತ್ತದೆ ನಿಮ್ಮಲ್ಲಿ ನಾಲ್ಕು ಜನರ ತಂಡ ಮಾಡಿ ಕಟ್ಟಡದ ಪ್ರತಿಯೊಂದು ಹಂತದಲ್ಲಿ ಪರಿಶೀಲನೆ ಮಾಡಿಸಲಾಗುತ್ತದೆ ಕಟ್ಟಡವು ಗುಣಮಟ್ಟದೊಂದಿಗೆ ಮಾದರಿ ಕಟ್ಟಡ ನಿರ್ಮಿಸಲು ಎಲ್ಲರ ಸಹಕಾರ ಮುಖ್ಯ ಎಂದರು.

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಸಭೆ ಇದೆ ಎಂದು ಗೊತ್ತಿದ್ದರೂ ನಗರಸಭೆ ವ್ಯಾಪ್ತಿಯ ಕೆಲವು ಗುತ್ತಿಗೆದಾರರು ಸಭೆಗೆ ಬಂದಿಲ್ಲ ಎಂದು ಆಯುಕ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತರು ತಮ್ಮ ವ್ಯಾಪ್ತಿಯ ಗುತ್ತಿಗೆದಾರರನ್ನು ಕರೆಸಿ ಸಭೆ ಮಾಡಿ ಅವರಿಗೆ ಕಾಮಗಾರಿಗಳ ಬಗ್ಗೆ ಗಡುವು ನೀಡಬೇಕು ಜೊತೆಗೆ ನಗರಸಭೆಯಲ್ಲಿನ ದಳ್ಳಾಳಿಗಳನ್ನು ದೂರವಿಟ್ಟರೆ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದರು.

ಸಮರ್ಪಕ ಕಸ ನಿರ್ವಹಣೆ

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ನಗರಸಭೆಗೆ ಸಂಬಂಧಿಸಿದ ಯಾವುದೇ ಫೈಲ್‌ಗಳು ಬಂದರೂ ಕೂಡಲೇ ಪರಿಹಾರ ಮಾಡಿ ಕಳಸಲಾಗುತ್ತಿದೆ. ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಹಾರ ಮಾಡಲು ಕಚೇರಿಯ ಸಿಬ್ಬಂದಿ ಕೂಡ ಸಿದ್ದರಿದ್ದಾರೆ ಬೇಸಿಗೆ ಪ್ರಾರಂಭವಾಗುತ್ತಾ ಇದೆ ನೀರಿಗೆ ಸಮಸ್ಯೆಯಾಗಬಾರದು, ಕಸದ ನಿರ್ವಹಣೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ತಹಸೀಲ್ದಾರ್ ಹರ್ಷವರ್ಧನ್, ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು.

Share this article