‘ದಿ ಕ್ಲಬ್‌’ ಗೋಡೆ ರಸ್ತೆಗೆ ಉರುಳಿ ಅವಾಂತರ

KannadaprabhaNewsNetwork |  
Published : May 21, 2024, 02:10 AM ISTUpdated : May 21, 2024, 07:54 AM IST
Accident 4 | Kannada Prabha

ಸಾರಾಂಶ

ದಿ ಕ್ಲಬ್‌ ಕಟ್ಟಡ ತೆರವು ವೇಳೆ ಗೋಡೆ ರಸ್ತೆ ಬಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಬೆಂಗಳೂರು : ಮೈಸೂರು ರಸ್ತೆಯ ‘ದಿ’ ಕ್ಲಬ್‌ ಆವರಣದಲ್ಲಿ ಹಳೆ ಕಟ್ಟಡ ನೆಲಸಮಗೊಳಿಸುವ ಕಾಮಗಾರಿ ವೇಳೆ ರಸ್ತೆಗೆ ಗೋಡೆ ಉರುಳಿದ ಪರಿಣಾಮ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾದ ಘಟನೆ ಸೋಮವಾರ ನಡೆದಿದೆ.

ಈ ಅವಘಡದಲ್ಲಿ ಆಟೋ ಸೇರಿದಂತೆ ಕೆಲ ವಾಹನಗಳು ಜಖಂಗೊಂಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಹೋಗಿದ್ದ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಗೋಡೆ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ನಂತರ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ಸುಗಮವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ದಿನಗಳಿಂದ ದಿ ಕ್ಲಬ್‌ ಆ‍ವರಣದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಳೇ ಕಟ್ಟಡಗಳ ಕೆಡವಲಾಗುತ್ತಿದೆ. ಎಂದಿನಂತೆ ಕ್ಲಬ್ ಆವರಣದಲ್ಲಿ ಸೋಮವಾರ ಸಹ ಕೆಲಸ ಮಾಡುವಾಗ ಗೋಡೆ ಕುಸಿದು ರಸ್ತೆಗೆ ಉರುಳಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ತೆರಳಿ ಕ್ಲಬ್‌ನವರು ಜೆಸಿಬಿಯನ್ನು ತರಿಸಿ ರಸ್ತೆ ಬಿದ್ದಿದ್ದ ಇಟ್ಟಿಗೆ ಹಾಗೂ ಮಣ್ಣನ್ನು ತೆರವುಗೊಳಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಘಟನೆ ಬಗ್ಗೆ ಸಂಚಾರ ಠಾಣೆ ದೂರು ನೀಡಿಲ್ಲ ಎಂದು ಸಂಚಾರ ಠಾಣೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕ್ಲಬ್ ವಿರುದ್ಧ ಸ್ಥಳೀಯರ ಆಕ್ರೋಶ

ಕ್ಲಬ್ ಆವರಣದಲ್ಲಿ ಕಟ್ಟಡಗಳ ತೆರವು ಕಾಮಗಾರಿಯನ್ನು ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ನಡೆಸಲಾಗುತ್ತಿದೆ ಎಂದು ದಿ ಕ್ಲಬ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಟ್ಟಡ ತೆರವುಗೊಳಿಸುವ ಮುನ್ನ ಸುತ್ತ ಬಲೆಗಳನ್ನು ಹಾಕಬೇಕಿತ್ತು. ಆದರೆ ಈ ಬಗ್ಗೆ ಕ್ಲಬ್‌ ಆಡಳಿತ ಮಂಡಳಿಯವರು ನಿರ್ಲಕ್ಷತನ ವಹಿಸಿದ್ದಾರೆ. ಇದರಿಂದ ಗೋಡೆಗಳು ಕುಸಿಯುವಾಗ ದೊಡ್ಡ ಕಾಂಕ್ರಿಟ್‌ ತುಂಡುಗಳು ಸಿಡಿದು ರಸ್ತೆಗೆ ಬೀಳುತ್ತಿವೆ. ಹೀಗಾಗಿ ಈ ರಸ್ತೆಯಲ್ಲಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕ್ಲಬ್‌ ನಿರ್ಲಕ್ಷ್ಯತನದ ಬಗ್ಗೆ ಬ್ಯಾಟರಾಯನಪುರ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ