ರಾಮಮಂದಿರ ಕಲ್ಲುಗಳ ಪರೀಕ್ಷಿಸಿದ್ದು ಕೆಜಿಎಫ್‌ನ ತಂತ್ರಜ್ಞರು

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಕಲ್ಲುಗಳ ಪರೀಕ್ಷೆಗೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಲ್ಯಾಬ್‌ನ್ನು ಹೊಂದಿರುವುದು ಎನ್‌ಐಆರ್‌ಎಂ ಸಂಸ್ಥೆ ಮಾತ್ರ. ಮಂದಿರ ನಿರ್ಮಾಣ ಕಾರ್ಯಕ್ಕೆ ವಿವಿಧ ಮಾದರಿಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಲ್ಲುಗಳನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ಕಲ್ಲುಗಳ ಆಯ್ಕೆಮಾಡಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ಇಡೀ ವಿಶ್ವಕ್ಕೆ ಟನ್‌ಗಟ್ಟಲೆ ಚಿನ್ನ ಕೊಟ್ಟಂತಹ ಕೆಜಿಎಫ್ ನಗರದ ನುರಿತ ಕಲ್ಲಿನ ತಂತ್ರಜ್ಞನರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮಹತ್ತರವಾದ ಪಾತ್ರವಹಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಬಳಸುವ ಪ್ರತಿಯೊಂದು ಕಲ್ಲಿನ ಕ್ವಾಲಿಟಿ ಅಸೆಸ್‌ಮೆಂಟ್, ಕ್ವಾಲಿಟಿ ಟೆಸ್ಟಿಂಗ್ ಮತ್ತು ಎಕ್ಸ್‌ಪರ್ಟ್ ಅಡ್ವೈಸ್ ಎಲ್ಲವನ್ನೂ ಕೆಜಿಎಫ್‌ನಲ್ಲಿರುವ ಎನ್‌ಐಆರ್‌ಎಂ (ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್) ಸಂಸ್ಥೆಗೆ ನೀಡಲಾಗಿತ್ತು. ಈ ಕಲ್ಲುಗಳ ಪರೀಕ್ಷಾ ಕಾರ್ಯವನ್ನು ಕೈಗೊಂಡ ವ್ಯಕ್ತಿ ಎನ್‌ಐಆರ್‌ಎಂನ ಪ್ರಿನ್ಸಿಪಲ್ ಸೈಂಟಿಸ್ಟ್ ಮತ್ತು ಹೆಚ್‌ಓಡಿ ಎ.ರಾಜನ್ ಬಾಬುರವರು ಕನ್ನಡಿಗರು ಎಂಬುದು ಹೆಮ್ಮೆಯ ವಿಚಾರವಾಗಿದೆ.

ಕೆಜಿಎಫ್‌ನ ಎನ್‌ಐಆರ್‌ಎಂನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯ್‌ಸ್ಟನ್ ಏಂಜಲೋ ವಿಕ್ಟರ್, ಡಿ.ಪ್ರಶಾಂತ್ ಕುಮಾರ್ ಇಬ್ಬರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸೈಂಟಿಸ್ಟ್ ಅಸಿಸ್ಟೆಂಟ್-೨ ಆಗಿ ಮತ್ತು ಪ್ರಭು ಆರ್, ಎಸ್ ಬಾಬು ಇವರಿಬ್ಬರು ಟೆಕ್ನಿಶಿಯನ್-೧ ಆಗಿ ತೊಡಗಿಸಿಕೊಂಡಿರುವುದು ಕೆಜಿಎಫ್‌ನ ಹೆಮ್ಮೆ.

ಸಾವಿರ ವರ್ಷ ಬಾಳಿಕೆ ಸಾಮರ್ಥ್ಯ

ರಾಮ ಜನ್ಮ ಭೂಮಿಯಲ್ಲಿ ನಿರ್ಮಾಣ ಮಾಡಿರುವ ರಾಮಮಂದಿರದ ರಚನೆ ಮತ್ತು ವಿನ್ಯಾಸ ಸಂಪೂರ್ಣವಾಗಿ ಕಲ್ಲಿನಿಂದ ಮಾಡಲ್ಪಟ್ಟಿದ್ದು, ರಾಮ ಮಂದಿರ ಸ್ಮಾರಕವು ಸುಮಾರು ಒಂದು ಸಾವಿರ ವರ್ಷಗಳಷ್ಟು ಬಾಳಿಕೆ ಬರುವಂತೆ ಮತ್ತು ಯಾವುದೇ ಲೋಹಗಳನ್ನು ಬಳಸದೇ ದೇವಾಲಯವನ್ನು ನಿರ್ಮಿಸಲಾಗಿದ್ದು, ಸಿಡಿಲು, ಭೂಕಂಪಗಳಂತಹ ಪ್ರಾಕೃತಿಕ ವಿಕೋಪಗಳಿಂದ ಧಕ್ಕೆಯಾಗದ ರೀತಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮೂರು ಮಾದರಿಯ ಕಲ್ಲುಗಳನ್ನು ಬಳಕೆ ಮಾಡಲಾಗಿದ್ದು, ತಳಪಾಯಕ್ಕೆ ಗ್ರಾನೈಟ್ ಮಾದರಿಯ ಕಲ್ಲು, ಸೂಪರ್ ಸ್ಟ್ರಕ್ಚರ್ ಕಲ್ಲುಗಳನ್ನು ಕಾಲಂಗಳು, ಕಾರ್ವಿಂಗ್ಸ್, ಭೀಮ್ಸ್‌ಗಳಿಗೆ ಮತ್ತು ಡೆಕೊರೇಟಿವ್ ಕಲ್ಲುಗಳನ್ನು ದೇವಾಲಯಕ್ಕೆ ಅಂದವನ್ನು ನೀಡಲು ಬಳಸಲಾಗಿದೆ ಎಂದು ರಾಜನ್ ಬಾಬು ತಿಳಿಸಿದ್ದಾರೆ. ಕಲ್ಲು ಪರೀಕ್ಷೆಗೆ ಅತ್ಯತ್ತಮ ಲ್ಯಾಬ್‌

ಕಲ್ಲುಗಳ ಪರೀಕ್ಷೆಗೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಲ್ಯಾಬ್‌ನ್ನು ಹೊಂದಿರುವುದು ಎನ್‌ಐಆರ್‌ಎಂ ಸಂಸ್ಥೆ ಮಾತ್ರ. ಮಂದಿರ ನಿರ್ಮಾಣ ಕಾರ್ಯಕ್ಕೆ ವಿವಿಧ ಮಾದರಿಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಲ್ಲುಗಳನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ಕಲ್ಲುಗಳ ಆಯ್ಕೆಯನ್ನು ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ.

ಕಲ್ಲುಗಳ ಪರೀಕ್ಷೆಗೆ ₹೮.೨೪ ಕೋಟಿ ವೆಚ್ಚಸುಮಾರು ೭-೮ ತಿಂಗಳ ಅವಧಿ ಕಲ್ಲುಗಳ ಆಯ್ಕೆ ಮಾಡಲು ತೆಗೆದುಕೊಂಡಿದ್ದು, ವಿನಾಶಕಾರಿ (ಡಿಸ್ಟ್ರಕ್ಟೀವ್) ಪರೀಕ್ಷೆಗಳಿಗೆ ೪೨.೫ ಲಕ್ಷ, ವಿನಾಶಕಾರಿಯಲ್ಲದ (ನಾನ್ ಡಿಸ್ಟ್ರಕ್ಟೀವ್) ಪರೀಕ್ಷೆಗಳಿಗೆ ೬೨೮.೫ ಲಕ್ಷ, ಕಲ್ಲುಗಳ ಪರೀಕ್ಷೆ (ರಾಕ್ ಟೆಸ್ಟಿಂಗ್)ಗೆ ೮೫.೩೬ ಲಕ್ಷ, ಆಯಾಮದ ಕಲ್ಲಿನ ಬ್ಲಾಕ್ ಗುಣಮಟ್ಟ ಪರಿಶೀಲನೆ (ಕ್ವಾಲಿಟಿ ಚೆಕಿಂಗ್ ಆಫ್ ಡೈಮೆನ್ಶಲ್ ಸ್ಟೋನ್ ಬ್ಲಾಕ್ಸ್)ಗೆ ೭೦.೮೦ ಲಕ್ಷ ರೂ ಒಟ್ಟಾರೆ ಕಲ್ಲುಗಳ ಪರೀಕ್ಷೆಗೆ ೮.೨೪೩ ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ.

ಕರ್ನಾಟಕದ ಸಾದರಹಳ್ಳಿ, ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರಿನ ಶಿರಾದಿಂದ ಕಲ್ಲುಗಳನ್ನು ಪರೀಕ್ಷೆಗೊಳಪಡಿಸಿ ಅನುಮೋದನೆ ನೀಡಲಾಗಿತ್ತು. ೭ ಪದರಗಳುಳ್ಳ ದೇವಾಲಯದ ತಳಪಾಯ ನಿರ್ಮಾಣಕ್ಕೆ ೧.೨ ಮೀಟರ್ ಉದ್ದ ಮತ್ತು ೦.೮೦ ಸೆಂ.ಮೀ ಅಗಲ ಸೇರಿದಂತೆ ವಿವಿಧ ಅಳತೆಯ ಒಟ್ಟು ೨೦೭೦೦ ಕಲ್ಲುಗಳನ್ನು ಅಂದರೆ ಶೇ ೬೦ರಷ್ಟು ಕಲ್ಲುಗಳನ್ನು ತಳಪಾಯಕ್ಕೆ ಬಳಸಲಾಗಿದೆ. ಅಲ್ಲದೇ ಇವುಗಳನ್ನು ಇಂಟರ್ ಲಾಕಿಂಗ್ ಪದ್ಧತಿಯ ಮೂಲಕ ಅಳವಡಿಸಿರುವುದು ವಿಶೇಷ.ಮರಳು ಶಿಲೆಗಳ ಬಳಕೆ:

ಮರಳು ಶಿಲ್ಪಗಳಿಗೆ ರಾಜಸ್ಥಾನ ಪ್ರಸಿದ್ಧಿಯನ್ನು ಪಡೆದಿರುವುದರಿಂದ ದೇವಾಲಯದ ಸೂಪರ್ ಸ್ಟ್ರಕ್ಚರ್‌ನ್ನು ರಚಿಸಲು ರಾಜಸ್ಥಾನದ ಮರಳು ಶಿಲೆಗಳನ್ನು ಬಳಸಲಾಗಿದ್ದು, ಇವುಗಳನ್ನು ರಾಜಾಸ್ಥಾನದ ಬನ್ಸಿ ಪಾಪೂರ್, ಪಿಂದ್ವಾರ ಮತ್ತು ಬಯಾನಾ ಸ್ಥಳಗಳಿಂದ ತಂದು ಪರೀಕ್ಷೆಗೊಳಪಡಿಸಿ ಬಳಿಕ ಆ ಕಲ್ಲುಗಳು ದೊರೆಯುವ ಕ್ವಾರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಂತಿಮಗೊಳಿಸಿ, ನಿರ್ಮಾಣ ಕಾರ್ಯಕ್ಕೆ ಬಳಸಲಾಗಿದೆ.

Share this article