ಶಿರಹಟ್ಟಿ: ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ರೈತರು ಮತ್ತು ಕೂಲಿ ಕೆಲಸ ನಂಬಿಕೊಂಡು ಜೀವನೋಪಾಯ ನಡೆಸುವ ಜನತೆ ಈ ಬಾರಿ ತೀವ್ರ ಬರಗಾಲ ಎದುರಿಸುವಂತಾಗಿದ್ದು, ನೆಮ್ಮದಿಯ ಜೀವನ ಸಾಗಿಸಲು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಕರೆ ನೀಡಿದರು.
ಮಂಗಳವಾರ ತಾಪಂ ಕಾರ್ಯಾಲಯದ ಎದುರು ನರೇಗಾ ಯೋಜನೆಯಡಿ ಮನೆ ಮನೆ ಜಾಥಾ ಅಂಗವಾಗಿ ಉದ್ಯೋಗ ರಥ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆ ಎಂಬ ಹೆಗ್ಗಳಿಕೆಗೆ ಭಾರತ ಸರ್ಕಾರದ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪಾತ್ರವಾಗಿದೆ. ದೇಶದ ಎಲ್ಲ ರಾಜ್ಯಗಳ ಎಲ್ಲ ವಯಸ್ಕ ಜನರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದರು.ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ ೧೦೦ ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತವಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆ ರೂಪಿಸಲಾಗಿದೆ. ಸ್ಥಳೀಯರು ಉದ್ಯೋಗ ಪಡೆದುಕೊಳ್ಳುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಉದ್ಯೋಗ ಖಾತ್ರಿ ಎನ್ನುವುದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಮಾಡಿಕೊಳ್ಳುವುದರ ಮೂಲಕ ಆರ್ಥಿಕ ಭದ್ರತೆ ಸ್ಥಿರ ಮಾಡಿಕೊಳ್ಳಬಹುದು ಎಂದರು.ಕೆರೆ ಕಟ್ಟೆಗಳ ನಿರ್ಮಾಣ, ಕೆರೆ ಹೂಳೆತ್ತುವುದು, ಸಿಸಿ ರಸ್ತೆಗಳ ನಿರ್ಮಾಣದಂತಹ ಸಾಮೂಹಿಕ ಕೆಲಸಗಳು. ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಜಮೀನಿನಲ್ಲಿ ಗಿಡಗಳನ್ನು ನೆಡುವುದು, ತೋಟಗಾರಿಕೆ ಬೆಳೆ ಬೆಳೆಯುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಿಕೊಳ್ಳಬಹುದು. ಸಾರ್ವಜನಿಕರು ತಮಗೆ ಅಗತ್ಯವಾದ ಕೆಲಸಗಳ ಪಟ್ಟಿಯನ್ನು ನೀಡಿದರೆ ಅದಕ್ಕೆ ತಕ್ಕದಾಗಿ ಕ್ರಿಯಾ ಯೋಜನೆ ರೂಪಿಸಿ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದು, ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಒಂದು ಕುಟುಂಬಕ್ಕೆ ೫೦ ದಿನಗಳ ಅಂದರೆ ಹೆಚ್ಚುವರಿಯಾಗಿ ಒಟ್ಟು ೧೫೦ ದಿನಗಳ ಉದ್ಯೋಗ ಒದಗಿಸಲು ಅವಕಾಶವಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.ದನದ ಕೊಟ್ಟಿಗೆ, ಕುರಿ, ಕೋಳಿ, ಹಂದಿ ಶೆಡ್‌ಗಳು, ಎರೆಹುಳು ತೊಟ್ಟಿ, ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣ, ಕೃಷಿ ಹೊಂಡ, ಕೃಷಿ ಬಾವಿ ಮತ್ತು ಕೃಷಿ ಜಮೀನಿಗೆ ಸಂಬಂಧಿಸಿದ ಇತರೆ ಕಾಮಗಾರಿಗಳು, ಇಂಗು ಗುಂಡಿ ನಿರ್ಮಾಣ ಹಾಗೂ ತೋಟ ನಿರ್ಮಾಣ ಸೇರಿದಂತೆ ಮುಂತಾದ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶವಿದೆ ಎಂದು ಹೇಳಿದರು.
ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ಸಾರ್ವಜನಿಕರು ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಮತ್ತು ಯೋಜನೆಯಡಿ ಕೆಲಸ ಪಡೆಯಲು ಸಮೀಪದ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ ರೈತರು ಹಾಗೂ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕನಿಷ್ಠ ನೂರು ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.ಐಇಸಿ ಸಂಯೋಜಕ ಮಂಜುನಾಥ ಸ್ವಾಮಿ, ಗ್ರಾಪಂ ಪಿಡಿಓ, ಕಾರ್ಯದರ್ಶಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ಹಾಜರಿದ್ದರು.