ಲೋಕ್ ಅದಾಲತ್ । ದಂಪತಿಗೆ ಸಲಹೆ । ಮಹಿಳಾ ಸಂರಕ್ಷಣಾ ಕಾಯ್ದೆಯ ಪ್ರಕರಣ ಸುಖಾಂತ್ಯ
ಕನ್ನಡಪ್ರಭ ವಾರ್ತೆ ಶಹಾಪುರಸಂಸಾರದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಇವುಗಳನ್ನು ತಾಳ್ಮೆ, ನಂಬಿಕೆ, ಧೈರ್ಯ, ಸಂಯಮದ ಮೂಲಕ ಬಗೆಹರಿಸಿಕೊಳ್ಳಬೇಕು. ಅಂದಾಗ ಕುಟುಂಬದಲ್ಲಿ ಸಾಮರಸ್ಯ ಮೂಡುತ್ತದೆ ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ ದಂಪತಿಗೆ ತಿಳಿಹೇಳಿದರು.
ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಕೌಟಂಬಿಕ ಹಿಂಸೆಯಿಂದ ಮಹಿಳಾ ಸಂರಕ್ಷಣಾ ಅಧಿನಿಯಮ-2005 ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸುಖಾಂತ್ಯಗೊಳಿಸಿದರು.ಪತಿಯ ಮನೆಯ ಕುಟುಂಬದ ಸದಸ್ಯರು ಕೌಟಂಬಿಕ ಹಿಂಸೆ ನೀಡಿದ್ದಾರೆ. ನನ್ನ ಹಾಗೂ ಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ಪತಿಯ ವಿರುದ್ಧ ಅರ್ಜಿ ಸಲ್ಲಿಸಿದ ಪತ್ನಿ ದೂರಿಗೆ ಕೊನೆಗೆ ನ್ಯಾಯಾಧೀಶರು ಇಬ್ಬರಲ್ಲಿ ಪರಸ್ಪರ ವಿಶ್ವಾಸ ಮೂಡಿಸಿ ಮತ್ತೆ ಸುಖ ದಾಂಪತ್ಯಕ್ಕೆ ಅಣಿ ಮಾಡಿದರು.
ಹಿನ್ನೆಲೆ:ಮೂರು ವರ್ಷ ಹಿಂದೆ ಚಿತ್ತಾಪುರ ತಾಲೂಕಿನ ಯಾಗಾಪುರ ಫತ್ತು ನಾಯಕ ತಾಂಡಾದ ಗುರುನಾಥ ಚವ್ಹಾಣ ಜೊತೆ ಶಹಾಪುರ ತಾಲೂಕಿನ ಉಳ್ಳೆಸೂಗೂರ ತಾಂಡಾದ ಅನ್ನುಬಾಯಿ ಜತೆಗೆ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಇದ್ದಾರೆ. ಪತಿಯ ಮನೆಯ ಕುಟುಂಬದ ಸದಸ್ಯರು ಮಾನಸಿಕ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಪತಿಯ ಜೊತೆ ಜೀವನ ಮುನ್ನಡೆಸಲು ಸಾಧ್ಯವಿಲ್ಲ ಎಂದು ಅನ್ನುಬಾಯಿ 2022ರಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ರಾಜಿ ನಡೆದಾಗ 9 ಲಕ್ಷ ರು. ಪರಿಹಾರ ನೀಡಿದರೆ, ಇಬ್ಬರು ಪರಸ್ಪರ ವಿಚ್ಚೇದನ ಮಾಡಿಕೊಳ್ಳಲು ಸಹಮತ ನೀಡಿದ್ದರು.
ಆಗ ನ್ಯಾಯಾಧೀಶರು ಬುದ್ದಿಮಾತು ಹೇಳಿದರು. ಹಣ ತೆಗೆದುಕೊಂಡು ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ. ಅನವಶ್ಯಕವಾಗಿ ಸ್ವಪ್ರತಿಷ್ಠೆಗೆ ಜೀವನ ಹಾಳು ಮಾಡಿಕೊಳ್ಳಬೇಡಿ. ನೆಮ್ಮದಿ ಜೀವನಕ್ಕೆ ಪರಸ್ಪರ ವಿಶ್ವಾಸ, ನಂಬಿಕೆ ಜೀವನದ ಮೂಲ ಧ್ಯೇಯವಾಗಿದೆ. ಸುಖ ಸಂಸಾರ ನಡೆಸುವಂತೆ ಸೂಚಿಸಿದಾಗ 9 ಲಕ್ಷ ರು. ಜೀವನಾಂಶ ಹಣ ನಿರಾಕರಿಸಿ ಇಬ್ಬರು ಪರಸ್ಪರ ಒಂದಾಗಿ ಬಾಳುವುದಾಗಿ ಒಪ್ಪಿಕೊಂಡರು. ಅರ್ಜಿದಾರ ಪರ ವಕೀಲೆ ಸತ್ಯಮ್ಮ ಹೊಸಮನಿ, ಪ್ರತಿವಾದಿ ಪರ ಇದ್ದ ಸಿ.ಟಿ.ಜಾದವ ಇಬ್ಬರೂ ದಂಪತಿಗೆ ಒಂದಾಗಲು ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು.ಆಗ ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಲ್ಲಿ ಇಬ್ಬರು ದಂಪತಿ ಪರಸ್ಪರ ಹಾರ ಬದಲಾಯಿಸಿ ಸಿಹಿ ಹಂಚಿ ಮರು ದಾಂಪತ್ಯ ಬದುಕಿಗೆ ಹೆಜ್ಜೆ ಹಾಕಲು ಸಮ್ಮತಿಸಿದರು ಎಂದು ಪ್ರತಿವಾದಿ ಪರ ವಕೀಲ ಸಿ.ಟಿ.ಜಾಧವ್ ಹೇಳಿದರು.
ಲೋಕ ಅದಾಲತ್ : 2,196 ಪ್ರಕರಣ ಇತ್ಯರ್ಥ:ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಅಂಗವಾಗಿ ಶನಿವಾರ ನಗರದ ಮೂರು ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ಪರಸ್ಪರ ಸಂಧಾನದ ಮೂಲಕ 2,196 ಪ್ರಕರಣ ಹಾಗೂ 1.7 ಕೋಟಿ ರು.ಹಣ ಸಂದಾಯದ ಬಗ್ಗೆ ಇತ್ಯರ್ಥಪಡಿಸಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಾಧೀಶ ಸಿದ್ದರಾಮ ಟಿ.ಪಿ. ತಿಳಿಸಿದ್ದಾರೆ. 9ವೈಡಿಆರ್3: ಶಹಾಪುರ ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಜೀವನಾಂಶ ಕೋರಿ ಬಂದ ಇಬ್ಬರು ದಂಪತಿ ಒಂದಾದರು.