ವಿಶ್ವನಾಥ ಮಲೇಬೆನ್ನೂರು
ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಹಾಯವಾಣಿ ಕರೆ ಸಂಖ್ಯೆ 2.38 ಲಕ್ಷಕ್ಕೆ ಇಳಿಕೆವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ. ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ
ಕೆಎಸ್‌ಎನ್‌ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್‌ಎನ್‌ಡಿಎಂಸಿಯ ನೌಕರರು ಪತ್ರ ಬರೆದಿರುವುದು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್‌ಗಳ ಪೈಕಿ 1,044 ಸೆನ್ಸರ್ ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್ ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್ ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಎಂ.ಎಸ್. ದಿವಾಕರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಕೆಎಸ್‌ಎನ್‌ಡಿಎಂಸಿ ಸಿಬ್ಬಂದಿಗೆ ಕಿರುಕುಳ?ಸಂಸ್ಥೆಯ ನೌಕರರಿಗೆ ಪಿಎಫ್ ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್ ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.