ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ಗೇಕರಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀಮತಿ ಚೆನ್ನಮ್ಮ, ಎಚ್.ಡಿ. ದೇವೇಗೌಡರ ಸಮುದಾಯ ಭವನವನ್ನು ಶಾಸಕ ಸ್ವರೂಪ್ ಪ್ರಕಾಶ್ ಅವರು ಉದ್ಘಾಟಿಸಿದರು.ಗ್ರಾಮಕ್ಕೆ ಆಗಮಿಸಿದ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಅಭೂತಪೂರ್ವವಾಗಿ ಬರಮಾಡಿಕೊಂಡರು. ಸಮುದಾಯ ಭವನ ಉದ್ಘಾಟನೆಗೂ ಮುನ್ನ ಗ್ರಾಮದ ಹುಚ್ಚಮ್ಮ ದೇವಿ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಶಾಸಕ ಸ್ವರೂಪ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮದ ಜನರ ಬಹುದಿನಗಳ ಬೇಡಿಕೆ ಆಗಿದ್ದ ಸಮುದಾಯ ಭವನ ಇಂದು ಉದ್ಘಾಟನೆ ಆಗಿದೆ. ಇಲ್ಲಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮದಲ್ಲಿ ಇನ್ನು ಹಲವು ಸಮಸ್ಯೆಗಳ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ, ತಮ್ಮೆಲ್ಲರ ಸಹಕಾರದಿಂದ ತಾನು ಶಾಸಕನಾಗಿದ್ದೇನೆ, ತಮ್ಮ ಋಣ ತೀರಿಸುವ ಸಲುವಾಗಿ ತನ್ನ ಅವಧಿಯಲ್ಲಿ ನನ್ನ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಈ ಭಾಗದಲ್ಲಿ ವಿವಿಧ ಗ್ರಾಮಗಳ ಜನರು ತಮ್ಮ ಕೃಷಿ ಭೂಮಿಯನ್ನು ಲೇಔಟ್ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದಾರೆ. ಆದರೆ ಅವರಿಗೆ ಸಿಗಬೇಕಾದ ಪರ್ಯಾಯ ನಿವೇಶನ ಇನ್ನು ಸಿಕ್ಕಿಲ್ಲ. ಮುಂದಿನ ವಾರದಲ್ಲಿ ಹೂಡಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅವರಿಗೆ ಸಿಗಬೇಕಾದ ನಿವೇಶನ ಕೊಡಿಸುವ ಸಲುವಾಗಿ ಕೆಲಸ ಮಾಡಲಾಗುವುದು ಎಂದೂ ಭರವಸೆ ನೀಡಿದ್ದರು.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ದಿ. ಮಾಜಿ ಶಾಸಕ ಪ್ರಕಾಶ್ ಅವರ ಅವಧಿಯಲ್ಲೇ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿತ್ತು. ಆದರೆ ಸುಮಾರು ಮೂವತ್ತು ವರ್ಷಗಳಿಂದ ಉದ್ಘಾಟನೆ ಆಗದೇ ಬಾಕಿ ಉಳಿದಿತ್ತು. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸುಸಜ್ಜಿತ ಕಟ್ಟಡ ಗ್ರಾಮದ ಜನರ ಶುಭ ಸಮಾರಂಭಗಳಿಗೆ ಸಜ್ಜಾಗಿದೆ ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು. ಬಹುತೇಕ ಜೆಡಿಎಸ್ ಬೆಂಬಲ ಹೊಂದಿರುವ ಗ್ರಾಮಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿರುವುದು ನಮ್ಮ ಆದ್ಯ ಕರ್ತವ್ಯ. ಕಳೆದ ಹಲವು ವರ್ಷಗಳ ಗ್ರಾಮಸ್ಥರ ಬೇಡಿಕೆ ಆಗಿದ್ದ ಈ ಸಮುದಾಯಭವನ ಮಟ್ಟದ ಕಾಮಗಾರಿ ಮಾಡಲು ಸಹಕಾರ ನೀಡಿದ ಶಾಸಕರು ಹಾಗೂ ಇತರ ಗ್ರಾಮದ ಸದಸ್ಯರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.